ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.
ಬಳಿಕ ಹೈಕೋರ್ಟ್‌ನಲ್ಲಿ ಬಾರ್ ಕೌನ್ಸಿಲ್ ಆಫ್ ಕರ್ನಾಟಕದಿಂದ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ನ್ಯಾ. ವಿಭು ಬಖ್ರು, ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿರುವುದು ನನ್ನ ಸೌಭಾಗ್ಯ. ದೇಶದ ಸಂವಿಧಾನ ಮತ್ತು ಕಾನೂನಿನ ಅಭಿವೃದ್ಧಿಯಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಿದೆ. ಮೊದಲಿನಿಂದಲೂ ಶ್ರೇಷ್ಠ ನ್ಯಾಯಾಂಗ ಅಧಿಕಾರಿಗಳು, ವಿಧ್ವಾಂಸರು, ಸುಧಾರಕರನ್ನು ದೇಶಕ್ಕೆ ನೀಡಿದೆ ಎಂದರು.ನ್ಯಾ.ಎಂ.ವೆಂಕಟಾಚಲಯ್ಯ ಅವರನ್ನು ಹೆಮ್ಮೆಯಿಂದ ನಾವು ಸ್ಮರಿಸುತ್ತೇವೆ. ದೇಶದ ಮುಖ್ಯನ್ಯಾಯಮೂರ್ತಿಯಾಗಿದ್ದ ಅವರು ನ್ಯಾಯಾಂಗಕ್ಕೆ ಚಾತುರ್ಯ, ಗೌರವ, ನಿಷ್ಪಕ್ಷಪಾತತೆ ತಂದುಕೊಟ್ಟರು. ನ್ಯಾಯಾಂಗದ ಸ್ವಾಯತ್ತೆ, ಮಾನವ ಹಕ್ಕುಗಳ ಕುರಿತ ಅವರ ಬದ್ಧತೆ ಅನೇಕ ತಲೆಮಾರುಗಳಿಗೆ ಸ್ಪೂರ್ತಿ ನೀಡುತ್ತದೆ. ಕಾನೂನು ನಮಗೆ ಧರ್ಮ. ಕಾನೂನು ಎತ್ತಿಹಿಡಿಯಲು ಬದ್ಧರಾಗಿರುತ್ತೇವೆ. ನ್ಯಾಯಾಂಗ ಬಲವಾಗಿದ್ದರೆ ಸಂವಿಧಾನ ನೀಡಿರುವ ಸ್ವಾತಂತ್ರ್ಯದ ಹಕ್ಕು ಸುಸ್ಥಿರವಾಗಿರುತ್ತದೆ. ನಿಮಗಿರುವ ನಂಬಿಕೆಯೇ ಈ ಸಂಸ್ಥೆ ಸುಸ್ಥಿರವಾಗಿರಲು ಕಾರಣವಾಗುತ್ತದೆ. ಹೀಗಾಗಿ, ನಿಮ್ಮ ನಂಬಿಕೆ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ನ್ಯಾಯಮೂರ್ತಿ ಹೇಳಿದರು.
ಪರಸ್ಪರ ಸಹಭಾಗಿತ್ವದ ಈ ಪಯಣದಲ್ಲಿ ನಾವು ಕರ್ನಾಟಕದ ಶ್ರೀಮಂತ ತತ್ವಜ್ಞಾನದ ಪರಂಪರೆಯಿಂದಲೂ ಸ್ಪೂರ್ತಿಯನ್ನು ಪಡೆಯಬೇಕಿದೆ. ಸಮಾಜದ ಪ್ರತಿಯೊಬ್ಬರಿಗೂ ಗೌರವ, ಸಮಾನತೆ, ನೈತಿಕ ಸ್ಥೈರ್ಯ ಸಿಗಬೇಕು ಎಂದು ದೂರದೃಷ್ಟಿಯ ಬಸವಣ್ಣನವರು ಹೇಳಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ, ತಳಮಟ್ಟಕ್ಕೆ ನ್ಯಾಯದಾನ ತಲುಪಬೇಕು ಎಂದು ಅವರು ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳ ಕುರಿತಾದ ಬದ್ಧತೆ ನಮಗೆ ದಾರಿ ದೀಪವಾಗಿದೆ ಎಂದು ನ್ಯಾ. ವಿಭು ಬಖ್ರು ತಿಳಿಸಿದರು.
ಬಾರ್ ಮತ್ತು ಬೆಂಚ್ ಒಂದು ನಾಣ್ಯದ ಎರಡು ಮುಖಗಳಲ್ಲ. ಬದಲಾಗಿ, ಸಂವಿಧಾನಿಕ ಉದ್ದೇಶಗಳನ್ನು ಕಾಪಾಡುವ ಉದ್ದೇಶದೊಂದಿಗೆ ಒಂದಾಗಿ ಕೆಲಸ ಮಾಡುವ ಸಹಭಾಗಿಗಳು ಎಂದು ನ್ಯಾ. ವಿಭು ಬಖ್ರು ನುಡಿದರು.