ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣ ಪಂಚಾಯ್ತಿಯ 15ನೇ ಹಣಕಾಸು ಯೋಜನೆಯಡಿ ಕಾಮಗಾರಿಗಳು ಪೂರ್ಣಗೊಂಡಿದ್ದು ಉಳಿದ ಹಣವನ್ನು ಆದ್ಯತೆಯ ಮೇರೆಗೆ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳುವಂತೆ ಪಪಂ ಅಧ್ಯಕ್ಷೆ ಮುಮ್ತಾಜ್ ಬಾನು ತಿಳಿಸಿದರು.ಇಲ್ಲಿನ ಪಪಂ ಆವರಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿ, 15ನೇ ಹಣಕಾಸು ಯೋಜನೆಯ ಎಸ್ ಎಫ್ ಸಿ ಯೋಜನೆಯಡಿ ಪೂರ್ಣಗೊಂಡಿರುವ ಕಾಮಗಾರಿಗಳ ಪೈಕಿ ₹10.62 ಲಕ್ಷ, 15ನೇ ಹಣಕಾಸು ಯೋಜನೆ ನಿರ್ಬಂಧಿತ ಅನುದಾನ ₹18.03 ಲಕ್ಷ ಒಟ್ಟಾರೆ ₹28.05 ಲಕ್ಷ ಹಣ ಉಳಿತಾಯವಾಗಿದೆ. ಈ ಪೈಕಿ ರಸ್ತೆ ಚರಂಡಿ ಪಾರ್ಕ್ ಅಭಿವೃದ್ಧಿ ಕಾಮಗಾರಿಗಳಿಗೆ ₹10.62 ಲಕ್ಷ, ಪೈಪ್‌ಲೈನ್ ಅಥವಾ ಬೋರ್‌ವೆಲ್ ಕೊರೆಸಲು ₹18.03 ಲಕ್ಷ ಅನುದಾನದ ಲಭ್ಯತೆ ಇದೆ. ಯಾವ ವಾರ್ಡ್ ಗಳಲ್ಲಿ ಇದುವರೆಗೂ ಮೂಲಭೂತ ಸೌಕರ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ, ಆ ವಾರ್ಡ್ ಗಳ ಅಭಿವೃದ್ಧಿಪಡಿಸಲು ಸರ್ವ ಸದಸ್ಯರು ಸಹಕಾರ ನೀಡಬೇಕು. ಇರುವ ಹಣವನ್ನು ಎಲ್ಲ ವಾರ್ಡುಗಳಿಗೆ ಹಂಚಿಕೆ ಮಾಡಿದರೆ ಯಾವುದೇ ಕಾಮಗಾರಿಗಳು ಪೂರ್ಣಗೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷತೀತವಾಗಿ ಸದಸ್ಯರು ಹನೂರಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಹಾಗೂ ತಾಲೂಕು ಕಚೇರಿ ಮುಂಭಾಗವಿರುವ ಶೌಚಾಲಯ ನಿರ್ವಹಣೆಗೆ ಟೆಂಡರ್ ಕರೆಯಲಾಗಿತ್ತು. ಆದರೆ ಈ ಹಿಂದೆ ಟೆಂಡರ್ ಪಡೆದುಕೊಂಡಿದ್ದ ಸೂರ್ಯ ಎಂಟರ್ಪ್ರೈಸಸ್ ಎಂಬ ಸಂಸ್ಥೆಗೆ 12 ವರ್ಷಗಳ ಅವಧಿಗೆ ಅನುಮತಿ ನೀಡಲಾಗಿದೆ ಎಂಬುವುದು ಸಭೆಯ ಗಮನಕ್ಕೆ ಬಂದ ಹಿನ್ನೆಲೆ ದಾಖಲಾತಿ ಪರಿಶೀಲಿಸಿ ನಂತರ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.ಮುಖ್ಯಾಧಿಕಾರಿ ಮಹೇಶ್ ಕುಮಾರ್ ಮಾತನಾಡಿ, ಪಪಂ ಖಾಸಗಿ ಬಸ್ ನಿಲ್ದಾಣದ ಮೊದಲನೇ ಅಂತಸ್ತಿನಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಯುತ್ತಿದೆ. ಆದರೆ ಇವರಿಗೆ ಯಾವ ಆಧಾರದ ಮೇಲೆ ಬಾಡಿಗೆಗೆ ನೀಡಲಾಗಿದೆ ಎಂಬುವುದರ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲ, ಈ ನಿಟ್ಟಿನಲ್ಲಿ ಅವರನ್ನು ಸಹ ಕರೆಸಿ ದಾಖಲಾತಿಗಳನ್ನು ಪರಿಶೀಲನೆ ಮಾಡಿದ ನಂತರ ಸದಸ್ಯರ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಗಿರೀಶ್, ಹರೀಶ್, ಸೋಮಶೇಖರ್, ಸಂಪತ್ ಕುಮಾರ್, ಸುದೇಶ್, ಮಹೇಶ್, ಪವಿತ್ರ ,ಮಂಜುಳಾ, ಲತಾಮಣಿ, ಮಹೇಶ್ ನಾಯಕ, ನಾಮನಿರ್ದೇಶಿತ ಸದಸ್ಯರುಗಳಾದ ಬಸವರಾಜು, ಮಹಾದೇಶ್, ನವೀನ್, ಕಿರಿಯ ಅಭಿಯಂತರ ನಾಗರಾಜು, ಮಾದೇಶ್, ಪ್ರಕಾಶ್, ಪ್ರತಾಪ್, ಚಂದ್ರ ಕುಮಾರ್, ಭರತ್, ಪ್ರಭಾಕರ್ ಪ್ರದೀಪ್, ಮಹೇಶ್ ಹಾಜರಿದ್ದರು.