ಕೆರೆಗಳಿಗೆ ನೀರು ಹರಿಸಲು ರೈತರ ಆಗ್ರಹ

KannadaprabhaNewsNetwork |  
Published : May 22, 2024, 12:47 AM IST
ತಾಳಿಕೋಟೆ 2 | Kannada Prabha

ಸಾರಾಂಶ

ತಾಲೂಕಿನ ಅಸ್ಕಿ ಕೆರೆಯಲ್ಲಿ ನೂರಾರು ರೈತರು ಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ನೀರು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಅಸ್ಕಿ ಕೆರೆಯಲ್ಲಿ ನೂರಾರು ರೈತರು ಅಸ್ಕಿ, ಬೆಕಿನಾಳ ಹಾಗೂ ಬೂದಿಹಾಳ ಪಿ.ಟಿ ಕೆರೆಗಳಿಗೆ ನೀರು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ನೇತೃತ್ವದಲ್ಲಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಪ್ರಾರಂಭಿಸಿದರು.

ಧರಣಿಗೂ ಮೊದಲು ಅಸ್ಕಿ ಗ್ರಾಮದ ಮುಖ್ಯ ಬಜಾರದಿಂದ ಪ್ರಾರಂಭಗೊಂಡ ಪ್ರತಿಭಟನೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ, ತಾಲೂಕಾಡಳಿತದ ವಿರುದ್ಧ ರೈತರು ವಿವಿಧ ಘೋಷಣೆಗಳನ್ನು ಹಾಕುತ್ತಾ ಗ್ರಾಮದ ಕೆರೆಗೆ ಹೋಗಿ ಪ್ರತಿಭಟನೆ ಆರಂಭಿಸಿದರು. ರೈತ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಮಾತನಾಡಿ, ಈ ವರ್ಷ ಭೀಕರ ಬರಗಾಲದ ನಿಮಿತ್ತವಾಗಿ ಈ ಭಾಗದಲ್ಲಿ ಎಲ್ಲ ಹಳ್ಳ, ಕೆರೆಗಳು ಬತ್ತಿಹೋಗಿವೆ. ಬಾವಿ ಹಾಗೂ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗಿ ಕೃಷಿಗೆ ನೀರಿಲ್ಲದೇ, ಜನ ಜಾನುವಾರುಗಳಿಗೆ ಕುಡಿಯಲು ಹನಿ ನೀರು ಇಲ್ಲದೇ ಪರಿತಪಿಸುವಂತಾಗಿದೆ. ಕೂಡಲೇ ಕೆರೆಗಳಿಗೆ ನೀರು ಹರಿಸಿ ನೀರಿನ ಭವಣೆ ತಪ್ಪಿಸಬೇಕೆಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಉಪಾಧ್ಯಕ್ಷ ಗೌಡಪ್ಪಗೌಡ ಹಳಿಮನಿ ಮಾತನಾಡಿ, ಈ ವರ್ಷದಲ್ಲಿ ಜಮೀನುಗಳಲ್ಲಿ ಮನುಷ್ಯರಿಗೆ ಮತ್ತು ಧನಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕುಡಿಯುವ ಹನಿ ನೀರಿಗೂ ಅಲೆದಾಡುವ ಸ್ಥಿತಿ ಬಂದೊದಗಿದೆ. ಸಂಬಂಧಿಸಿದ ತಾಲೂಕು ದಂಡಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಕೆರೆಗಳಿಗೆ ನೀರು ಹರಿಸಬೇಕು ಎಂದರು.

ತಾಲೂಕಾಧ್ಯಕ್ಷ ಶ್ರೀಶೈಲ ವಾಲಿಕಾರ ಮಾತನಾಡಿ, ಕೆರೆಗಳಿಗೆ ನೀರು ಹರಿಸದಿದ್ದರೆ ಈ ಭಾಗದ ಅಸ್ಕಿ, ಬೆಕಿನಾಳ, ಬೂದಿಹಾಳ, ಜಲಪೂರ, ಬನ್ನೆಟ್ಟಿ, ನೀರಲಗಿ, ವಣಕ್ಯಾಳ ಗ್ರಾಮ ರೈತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.

ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಡಾ.ಪ್ರಭುಗೌಡ ಬಿರಾದಾರ, ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅನ್ವರ ಅವಟಿ ಅವರು ಧರಣಿ ಬೆಂಬಲಿಸಿ ಮಾತನಾಡಿದರು. ಶಿವಶಂಕರ ಸಜ್ಜನ, ಲಿಂಗಣ್ಣ ನಾಯಕಲ್ ಮಾತನಾಡಿದರು.

ಅಧಿಕಾರಿಗಳ ಭೇಟಿ:

ಧರಣಿ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಪವನ ಬೆಂಕಿ ಮತ್ತು ಸರ್ಕಲ್ ವಿನೋದ ಸಿಂದಗಿರಿ ಅವರು ಭೇಟಿ ನೀಡಿ ಮನವಿ ಕೊಡಿ ಮೇಲಧಿಕಾರಿಗಳಿಗೆ ತಿಳಿಸುತ್ತೇವೆ ಎಂದರು. ಆಗ ರೈತರು ಸ್ಥಳಕ್ಕೆ ತಹಸೀಲ್ದಾರ್‌ ಹಾಗೂ ಸಂಬಂಧಿಸಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೆರೆಗೆ ನೀರು ಹರಿಸುವವರೆಗೂ ನಾವು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಶರಣಗೌಡ ಬಿರಾದಾರ, ಸಂಚಾಲಕರಾದ ಮಹಿಬೂಬ ಗೊಬ್ಬರಡಗಿ, ಗ್ರಾಪಂ ಉಪಾಧ್ಯಕ್ಷ ಅಯ್ಯಪ್ಪ ಮುಗಳಿ, ರಾಮನಗೌಡ ಚೌದ್ರಿ, ಮಲ್ಲಪ್ಪ ಅಂಗಡಿ, ಮುತ್ತು ಹೂಗಾರ, ಗುರನಗೌಡ ಬಿರಾದಾರ, ಮಂಜು ಪಡಶೆಟ್ಟಿ, ಮಹದೇವಪ್ಪ ಮಾದರ, ವೆಂಕಣ್ಣ ಗುತ್ಯಾಳ, ಬಸವರಾಜ ಹಡಪದ, ಶಾಂತಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಹಳಿಮನಿ, ಶಂಕರ ಮಗದಾಳ, ದೇವಿಂದ್ರ ತುರಕನಗೇರಿ, ಬೆಕಿನಾಳ ಗ್ರಾಮದ ದೇವಿಂದ್ರಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಲ್ಲಪ್ಪ ಮುದನೂರ, ಶ್ರೀಶೈಲ ಹಿರೇಮಠ, ರಾಮನಗೌಡ ಕರಕಳ್ಳಿ, ಲಕ್ಷ್ಮಣ ಚಲವಾದಿ, ಮರಲಿಂಗಪ್ಪ ನಾಟಿಕಾರ, ಮಡಿವಾಳಪ್ಪ ಸಜ್ಜನ, ಬೂದಿಹಾಳ ಗ್ರಾಮದ ಬಸನಗೌಡ ಪಾಟೀಲ, ಸಂತೋಷ ಕುಳಗೇರಿ, ಭೀಮನಗೌಡ ಬಿರಾದಾರ, ಶರಣಪ್ಪ ಹಯ್ಯಾಳ, ಜಟ್ಟೆಪ್ಪ ಮಾದರ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?