ಕಂಪ್ಲಿಯಲ್ಲಿ ರೈತ ಸಂಘದ ಸದಸ್ಯರ ಸಭೆ, ಟಿಬಿ ಜಲಾಶಯ ಮಂಡಳಿ ತೀರ್ಮಾನ ಬದಲಿಸಲಿಕನ್ನಡಪ್ರಭ ವಾರ್ತೆ ಕಂಪ್ಲಿ
ರೈತರ ಕೃಷಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಏ. 30ರ ತನಕ ಕಾಲುವೆಗೆ ನೀರು ಹರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.ಪಟ್ಟಣದ ಅತಿಥಿಗೃಹ ಆವರಣದಲ್ಲಿ ಸೋಮವಾರ ನಡೆದ ರೈತ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿ,
ಈಚೆಗೆ ನಡೆದ ಐಸಿಸಿ ಸಭೆಯಲ್ಲಿ ಎಲ್‌ಎಲ್ ಕಾಲುವೆಗೆ ಮಾ. 31ರ ತನಕ ನೀರು ಹರಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದ್ಯ ಭತ್ತ ಬೆಳೆ ವಡೆ ಬಿಚ್ಚುವ ಹಂತದಲ್ಲಿದ್ದು, ಸಮರ್ಪಕವಾಗಿ ನೀರು ಪೂರೈಸದಿದ್ದಲ್ಲಿ ಬೆಳೆ ನಷ್ಟವಾಗುವ ಸಾಧ್ಯತೆಯಿದೆ. ಏ. 30ರ ತನಕ ನೀರು ಹರಿಸಿದರೆ ಭತ್ತ ಬೆಳೆ ರೈತರ ಕೈ ಸೇರಲಿದೆ. ಜಲಾಶಯದ ನೀರನ್ನು ವ್ಯರ್ಥಗೊಳಿಸದೆ ಸಮರ್ಪಕವಾಗಿ ಬಳಸುವ ಮೂಲಕ ಹಾಗೂ ರೈತರ ಹಿತದೃಷ್ಟಿಯಿಂದ ಏ. 30ರ ತನಕ ಎಲ್‌ಎಲ್ ಕಾಲುವೆಗೆ ಹರಿಸುವಂತೆ ಒತ್ತಾಯಿಸಿದರು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಬೆಳೆ ನಷ್ಟ ಪರಿಹಾರವನ್ನು ಟಿಬಿ ಜಲಾಶಯ ಮಂಡಳಿಯೇ ಭರಿಸಬೇಕಾಗುತ್ತದೆ ಎಂದರು.ಏ. 10ರ ತನಕ ಎಲ್‌ಎಲ್ ಕಾಲುವೆಗೆ ನೀರು ಹರಿಸುವಂತೆ ಬಳ್ಳಾರಿ ಡಿಸಿಗೆ ರೈತ ಸಂಘದ ಅಧ್ಯಕ್ಷ ಜಿ. ಪುರುಷೋತ್ತಮಗೌಡ ಮನವಿ ಸಲ್ಲಿಸಿದ್ದು ಸರಿಯಲ್ಲ. ಏ. 30ರ ತನಕ ನೀರು ಹರಿಸಿದಲ್ಲಿ ಶೇ. 90ರಷ್ಟು ಭತ್ತ ಬೆಳೆ ದಕ್ಕಲು ಸಾಧ್ಯವಿದೆ. ಭತ್ತ ಬೆಳೆದ ರೈತರು ಸತತ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಪರಿಸ್ಥಿತಿ ಸರಿಯಾಗಿ ಅರಿಯದೆ ಡಿಸಿಗೆ ಮನವಿ ಕೊಟ್ಟ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತಮ್ಮ ನಿಲುವು ಬದಲಿಸಿಕೊಂಡು ಏ. 30ರ ತನಕ ನೀರು ಹರಿಸುವಂತೆ ಡಿಸಿಯನ್ನು ಒತ್ತಾಯಿಸಬೇಕು ಎಂದರು.ರೈತರಾದ ಡಾ. ಎ.ಸಿ. ದಾನಪ್ಪ, ಪಿ. ನಾರಾಯಣ ರೆಡ್ಡಿ, ಕೆ. ರಮೇಶ್, ಆದೋನಿ ರಂಗಪ್ಪ, ವಿ. ವೀರೇಶ, ಆನಂದರೆಡ್ಡಿ, ತಿಮ್ಮಪ್ಪನಾಯಕ, ಡಿ. ಮುರಾರಿ, ಗಂಗಣ್ಣ, ಸುದರ್ಶನ, ಜಡೆಪ್ಪ, ವಿ.ಟಿ. ರಾಜು ಇದ್ದರು.