ಕನ್ನಡಪ್ರಭ ವಾರ್ತೆ ಗುಬ್ಬಿ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಿಂಷಾನದಿಗೆ ಕಟ್ಟಿರುವ ವಾಸುದೇವರ ಅಣೆಕಟ್ಟು ಒತ್ತುವರಿಯಾಗುತ್ತಿದೆ. ಗುಬ್ಬಿ ತಹಸೀಲ್ದಾರ್, ಹೇಮಾವತಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ವಿರುದ್ಧ ಘೋಷಣೆ ಕೂಗಿ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು. ಒತ್ತುವರಿದಾರರ ಜೊತೆಗೆ ಅಧಿಕಾರಿಗಳು ಶಾಮೀಲು ಆಗಿರುವಂತೆ ಕಾಣುತ್ತಿದೆ. ಮಳೆಗಾಲದಲ್ಲಿ ಹೇಮಾವತಿ ನೀರು ತುಂಬಿ ಹರಿದಾಗ ಇಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿ ಸಹ ವಾಸುದೇವರ ಅಣೆಕಟ್ಟು ಪ್ರಸಿದ್ಧಿ ಪಡೆದಿದ್ದು ಈ ಅಣೆಕಟ್ಟೆಯನ್ನು ಉಳಿಸುವಂತಹ ಕೆಲಸವನ್ನು ಸರ್ಕಾರ ಮಾಡಲೇಬೇಕು. ಭೂ ಗಳ್ಳರಿಂದ ಆಣೆಕಟ್ಟು ಒತ್ತುವರಿ ಆಗಿದಂತೆ ನೋಡಿಕೊಳ್ಳಬೇಕು ಎಂದು ಬೋಚಿಹಳ್ಳಿ ಮತ್ತು ಅಕ್ಕಪಕ್ಕ ದ ಗ್ರಾಮಸ್ಥರು ಆಗ್ರಹಿಸಿದರು. ಹೋರಾಟಗಾರರಾದ ಆನಂದಯ್ಯ, ಮೂಡ್ಲ ಗಿರಿ ಯೋಗೇಶ್ ಮಾತನಾಡಿ, ಮಾತನಾಡಿ ಈ ಶಿಂಷಾನದಿಯ ನೀರು ವ್ಯರ್ಥವಾಗಬಾರದು ಎಂಬ ಹಿನ್ನೆಲೆಯಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದು ಇದರಿಂದ ಈ ಭಾಗದ ಹಲವು ಗ್ರಾಮಗಳಿಗೆ ನೀರಿನ ಅನುಕೂಲವಾಗಲಿದೆ. ಈ ನದಿಯಿಂದ ನೀರು ಕಲ್ಲೂರು ಕೆರೆಗೆ ಹರಿಯುವುದರಿಂದ ಸುಮಾರು 25 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ಕುಡಿಯುವ ನೀರು ಸಂತೋಷದ ಮಟ್ಟ ಹೆಚ್ಚಳವಾಗಿದೆ. ಮಳೆಬಂದ ಸಮಯದಲ್ಲಿ ಈ ಅಣೆಕಟ್ಟು ಪ್ರವಾಸಿ ತಾಣವಾಗಿ ಹೆಸರಾಗಿದೆ ಇಂತಹ ಅಣೆಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ಕೆಲವರು ನದಿಗೆ ಮಣ್ಣನ್ನು ಸುರಿದು ಜಾಗವನ್ನು ಅಕ್ರಮವಾಗಿ ಕಬಳಿಸಲು ಮುಂದಾಗಿದ್ದಾರೆ. ಈಗಾಗಲೇ ಅಲ್ಲಿನ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ಅಲ್ಲಿ ತಂತಿ ಬೇಲಿ ಹಾಕಲು ಹಾಗೂ ಕೃಷಿ ಚಟುವಟಿಕೆ ನಡೆಸಲು ಮುಂದಾಗಿದ್ದಾರೆ. ಇನ್ನೂ ಕೆಲವರು ಇದನ್ನು ವಾಣಿಜ್ಯ ಉದ್ದೇಶಕ್ಕೆಬಳಸಲು ಸಂಚು ನಡೆಸಿದ್ದಾರೆ ಎಂದರು ಆರೋಪಿಸಿದರು.
ನೀರಾವರಿ ಇಲಾಖೆ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಸ್ಥಳೀಯರು ಜಮೀನು ಪಡೆದು ಅವರಿಗೆ ಪರಿಹಾರ ನೀಡಿದ್ದಾರೆ. ಆದರೆ ಇನ್ನೂ ಸಹ ಕೆಲವರ ಹೆಸರು ಪಹಣಿ ಯಲ್ಲಿ ಬರುತ್ತಿರುವ ಹಿನ್ನೆಲೆ ಕೆಲವರು ಜಾಗ ನಮಗೆ ಸೇರಿದೆ ಎಂದು ನದಿ ಹರಿಯುವ ಜಾಗವನ್ನು ಒತ್ತುವರಿಗೆ ಮುಂದಾಗಿದ್ದಾರೆ. ಕೂಡಲೇ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಸಂಪೂರ್ಣ ದಾಖಲೆ ಪಡೆದು ಒತ್ತುವರಿ ಮಾಡಿರುವ ಜಾಗವನ್ನು ತೆರವು ಮಾಡಿ ಶಿಂಷಾ ನದಿ ಉಳಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆಯಲ್ಲಿ ಬೋಚಿಹಳ್ಳಿ ಹಾಗೂ ವರಹಸಂದ್ರ ಗ್ರಾಮಸ್ಥರು, ಉಮೇಶ್, ರಂಜಿತ್, ಲೋಕೇಶ್, ಚನ್ನವೀರಪ್ಪ, ನಾಗರಾಜು, ರವಿಕುಮಾರ್ ಹಾಗೂ ಹಲವು ಗ್ರಾಮಸ್ಥರು ಹಾಜರಿದ್ದರು.