ಡಿಕೆಶಿ ನಾಡಿದ ನಾಯಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದು ಸಂತಸದ ಸಂಗತಿ. ಡಿಕೆಶಿರವರು ಅನೇಕ ಬಾರಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಪೀರನ್ ಷಾ ವಲಿರವರ ಆಶೀರ್ವಾದ ಡಿಕೆಶಿ ಮೇಲೆ ಸದಾ ಇರಲಿದೆ.
ಕನ್ನಡಪ್ರಭ ವಾರ್ತೆ ರಾಮನಗರ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ. ಕೆ. ಶಿವಕುಮಾರ್ ರವರು ಸುಸೂತ್ರವಾಗಿ ಮತ್ತು ಜನಪರ ಆಡಳಿತ ನೀಡಲೆಂದು ಪ್ರಾರ್ಥಿಸಿ ನಗರಸಭೆ ಸದಸ್ಯ ಅಬ್ದುಲ್ ಸಮದ್ ಮತ್ತು ಯುವ ಮುಖಂಡ ಮಹಮ್ಮದ್ ಅಲಿಂ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ನಗರದ ಪೀರನ್ ಷಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಡಿ. ಕೆ. ಶಿವಕುಮಾರ್ ಅಧಿಕಾರ ಸ್ವೀಕಾರಕ್ಕೂ ಮುನ್ನ ದರ್ಗಾದಲ್ಲಿ ಸೇರಿದ ಅಲ್ಪಸಂಖ್ಯಾತರು ಪಕ್ಷಬೇಧ ಮರೆತು ಡಿ. ಕೆ. ಶಿವಕುಮಾರ್ ರವರ ಭಾವಚಿತ್ರ ಹಿಡಿದು ವಿಶೇಷ ಪ್ರಾರ್ಥನೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರಲ್ಲದೆ ಸಿಹಿ ಹಂಚಿ ಅಭಿಮಾನ ಮೆರೆದರು.
ನಗರಸಭೆ ಸದಸ್ಯರಾದ ಅಬ್ದುಲ್ ಸಮದ್ ಮಾತನಾಡಿ, ನಿಜವಾದ ಮಣ್ಣಿನ ಮಗ ಡಿ.ಕೆ.ಶಿವಕುಮಾರ್ ನಾಡಿನ ಮುಖ್ಯಮಂತ್ರಿ ಆಗಿರುವುದು ಸಂತಸ ತಂದಿದೆ. ಅವರ ಆಡಳಿತ ಅವಧಿಯಲ್ಲಿ ಯಾವುದೇ ವಿಘ್ನಗಳು ಎದುರಾಗದಂತೆ ಪ್ರಾರ್ಥಿಸಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗಿದೆ ಎಂದು ಹೇಳಿದರು.
ಡಿಕೆಶಿರವರು ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಆ ಮೂಲಕ ತಮ್ಮ ಆಡಳಿತದ ಅವಧಿಯಲ್ಲಿ ಹೊಸ ದಾಖಲೆ ಬರೆಯಬೇಕು. ಜೊತೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಶೇಷ ಒತ್ತು ನೀಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿಂ ಮಾತನಾಡಿ, ಶುಭ ದಿನದಂದು ಡಿಕೆಶಿರವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ಅವರು ನಿರ್ವಿಘ್ನವಾಗಿ ಒಳ್ಳೆಯ ಆಡಳಿತ ನೀಡಲೆಂದು ಹಾಗೂ ಮುಂದೆಯೂ ಅವರೇ ಸಿಎಂ ಆಗಲೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಡಿಕೆಶಿ ಶ್ರಮಿಸಿದರು. ಅವರ ನಿಷ್ಠೆಗೆ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಹುದ್ದೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕೆಂಗಲ್ ಹನುಮಂತಯ್ಯ ಮತ್ತು ಎಸ್. ಎಂ. ಕೃಷ್ಣ ಅವರಂತೆ ಜನಪರ ಆಡಳಿತ ನೀಡಿ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದರ್ಗಾ ಹಜರತ್ ಪೀರನ್ ಷಾ ವಲಿ ಕಮಿಟಿ ಕಾರ್ಯದರ್ಶಿ ಸೖಯದ್ ಲಿಯಾಕತ್ ಮಾತನಾಡಿ, ಡಿಕೆಶಿ ನಾಡಿದ ನಾಯಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದು ಸಂತಸದ ಸಂಗತಿ. ಡಿಕೆಶಿರವರು ಅನೇಕ ಬಾರಿ ದರ್ಗಾಕ್ಕೆ ಭೇಟಿ ನೀಡಿದ್ದಾರೆ. ಪೀರನ್ ಷಾ ವಲಿರವರ ಆಶೀರ್ವಾದ ಡಿಕೆಶಿ ಮೇಲೆ ಸದಾ ಇರಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಜಬಿ, ಜಲೀಲ್, ಉಸ್ಮಾನ್, ವಸೀಂ, ಅಸ್ಲಾಂ, ಶಫಿಕ್, ಸಾದಿಕ್,
ದರ್ಗಾ ಹಜರತ್ ಪೀರನ್ ಷಾ ವಲಿ ಕಮಿಟಿ ಅಧ್ಯಕ್ಷ ಅಜ್ಮತುಲ್ಲಾ ಖಾನ್, ಉಪಾಧ್ಯಕ್ಷ ಮುಸ್ಟಾಕ್ ಅಹಮದ್, ಜಫ್ರುಲ್ಲಾ ಖಾನ್, ಅಯಾಜ್ ಖಾನ್, ಹುರ್ಮತ್ ಬೇಗ್, ಶಹಬಾಜ್ ಖಾನ್ ಮತ್ತಿತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.