ಬಸವರಾಜ ಮಠದ
ಬಾಗಲಕೋಟೆ ಜಿಲ್ಲೆಯ 3ನೇ ಅತೀ ದೊಡ್ಡ ನಗರವಾದ ಇಳಕಲ್ಲ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಏನಿದಲ್ಲವೆಂದರೂ ದಿನನಿತ್ಯ ಮೂರ್ನಾಲ್ಕು ಜನ ಮರಣ ಹೊಂದುತ್ತಾರೆ. ನಗರದಲ್ಲಿ ಹೆಚ್ಚಾಗಿ ಶವಸಂಸ್ಕಾರದ ವೇಳೆ ಸುಡುವ ಸಂಪ್ರದಾಯ ಇದೆ. ಆದರೆ ಶವ ಸುಡಲು ನಗರದಲ್ಲಿ ವಿದ್ಯುತ್ ಚಿತಾಗಾರ ಇಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಶವ ಸುಡಲು ಒಣ ಕಟ್ಟಿಗೆ ಸಿಗುವುದು ದುರ್ಲಭ. ಕಟ್ಟಿಗೆ ಸಿಕ್ಕರೂ ದುಬಾರಿ ದರ. ಕಟ್ಟಿಗೆಯನ್ನು ಸ್ಮಶಾನಕ್ಕೆ ತರುವುದು ಹೊಂದಿಸಲು ಜನ ಸಿಗುವುದಿಲ್ಲ. ಸಿಕ್ಕರೂ ಅವರ ಕೂಲಿ ಅತ್ಯಂತ ದುಬಾರಿ ಇದೆ. ಇಷ್ಟೊಂದು ಹಣ ಹೊಂದಿಸಲು ಬಡವರಿಗೆ ಸಾಧ್ಯವಾಗುವುದಿಲ್ಲ.
ಇಳಕಲ್ಲ ನಗರದಲ್ಲಿ ದೊಡ್ಡ ಸ್ಮಶಾನ ಜಾಗವಿದೆ. ಅದರಲ್ಲಿ ಅರ್ಧ ಜಾಗ ಶವ ಹೂಳುವುದಕ್ಕೆ ಇನ್ನರ್ಧ ಶವ ಸುಡಲು ಇದೆ. ಅದರಲ್ಲಿ ಮಾರವಾಡಿ ಸಮಾಜದವರು ನವೀನ ಮಾದರಿಯ ಶವ ಸುಡುವ ಕಟ್ಟೆ ನಿರ್ಮಿಸಿದ್ದು, ತಾಂತ್ರಿಕ ಅಡಚಣೆಯಿಂದ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ನಗರದ ಜನತೆ ಅದರಲ್ಲಿಯೇ ಶವ ಸುಡುತ್ತಾರೆ. ಒಂದೇ ದಿನ ಮೂರ್ನಾಲ್ಕು ಜನ ಮರಣ ಹೊಂದಿದರೆ ಅಲ್ಲಿ ಶವ ಸುಡಲು ತೊಂದರೆ ಆಗಿ ಹೊರಗಡೆ ಸುಡುವ ಉದಾಹರಣೆಗಳು ಸಾಕಷ್ಟಿವೆ.ಇಷ್ಟೆಲ್ಲ ತೊಂದರೆ ಇದ್ದರೂ ನಗರಸಭೆ ಅಧಿಕಾರಿಗಳ ಕುರುಡುತನ ವಹಿಸಿದ್ದಾರೆ. ರಾಜ್ಯದ ಅನೇಕ ಪಟ್ಟಣಗಳಲ್ಲಿ ಶವ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ ನಿರ್ಮಿಸಲಾಗಿದೆ. ಆದರೆ ನಗರಸಭೆ ಸ್ಥಾನಮಾನ ಹೊಂದಿರುವ ಇಳಕಲ್ಲ ನಗರದಲ್ಲಿ ಶವ ಸುಡುವುದಕ್ಕೆ ವಿದ್ಯುತ್ ಚಿತಾಗಾರ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
ನಗರಸಭೆಯಲ್ಲಿನ ಸ್ಮಶಾನ ಫಂಡ್, ಸಂಸದರ, ಶಾಸಕರ ಹಾಗೂ ವಿಧಾನ ಪರಿಷತ್ ಸದಸ್ಯರ ಫಂಡ್ ಉಪಯೋಗ ಮಾಡಿಕೊಂಡು ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಇಳಕಲ್ಲ ನಗರದಲ್ಲಿ ೬೦ ಸಾವಿರಕ್ಕೂ ಅಧಿಕ ಜನರ ಶವ ಸುಡುವ ಸಂಪ್ರದಾಯ ಹೊಂದಿದ್ದಾರೆ. ಇಲ್ಲಿ ಬಡ ಜನರಿಗೆ ಶವ ಸುಡಲು ಬಹಳಷ್ಟು ತೊಂದರೆ ಆಗಿದೆ. ನಗರಸಭೆವರಾಗಲಿ, ಜನಪ್ರತಿನಿಧಿಗಳಾಗಲಿ ಅಗತ್ಯ ಅನುದಾನ ನೀಡಿ ವಿದ್ಯುತ್ ಚಿತಾಗಾರ ನಿರ್ಮಿಸಬೇಕು.