ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭೌಗೋಳಿಕ ಭಿನ್ನತೆಗೆ ಅನುಗುಣವಾಗಿ ಆಹಾರ ವೈವಿಧ್ಯತೆ ನಮ್ಮದಾಗಿದೆ. ಹಾಗಾಗೀ ಜೀವನ ಶೈಲಿಯಲ್ಲಿಯೂ ಬದಲಾವಣೆ ಕಾಣುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ಅಭಿಪ್ರಾಯಪಟ್ಟರು.ಕೃಷಿ ಇಲಾಖೆಯಿಂದ ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ಧ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ತನ್ನದೇ ಆದ ಅಚ್ಚಳಿಯದ ಇತಿಹಾಸ ಇದೆ. ಭಾರತ ಅವಿನಾಶಿ ದೇಶ. ಈ ದೇಶಕ್ಕೆ ಹಿಂದೆಯೂ ಏನೂ ಆಗಿಲ್ಲ, ಮುಂದೆಯೂ ಏನೂ ಆಗುವುದಿಲ್ಲ. ವಿನಾಶ ಅನ್ನುವುದೇ ಇಲ್ಲ. ಕೃಷಿಯಲ್ಲಿನ ವೈವಿಧ್ಯತೆಗಳ ಇಂತಹದ್ದೊಂದು ವಾತಾವರಣ ಸೃಷ್ಟಿಸಿವೆ. ರೈತರು ಸರ್ಕಾರದ ಸೌಲಭ್ಯ ಸದ್ಭಳಕೆ ಮಾಡಿಕೊಂಡು ಸುಸ್ಥಿರ ಕೃಷಿ ಮಾಡಬೇಕು ಎಂದರು.
ದೇಶದಲ್ಲಿ ಪ್ರತಿ ವರ್ಷವೂ ಡಿ. 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಸ್ಮರಣಾರ್ಥ ಅವರ ಜನ್ಮ ದಿನವನ್ನು ರೈತ ದಿನಾಚರಣೆಯಾಗಿ ನಡೆಸಿಕೊಂಡು ಬರಲಾಗಿದೆ. ಈ ವರ್ಷ ಸುಸ್ಥಿರ ಹಾಗೂ ಚೇತರಿಕೆಯತ್ತ ಆಹಾರ, ಸುರಕ್ಷತೆಗಾಗಿ ಕ್ರಿಯಾಶೀಲ ಪರಿಹಾರ ಎಂಬ ಧ್ಯೇಯ ವಾಕ್ಯದೊಂದಿಗೆ ರೈತ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿ ಹಳ್ಳಿಯಲ್ಲೂ ಈ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ರೈತ ದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು.ಭರತ ಖಂಡ ಮತ್ತು ಸುತ್ತಮುತ್ತಲಿನ ಮಧ್ಯ ಪ್ರಾಚ್ಯದ ರಾಷ್ಟ್ರಗಳವರೆಗೂ ಬಹಳಷ್ಟು ಪ್ರಾಚೀನ ಸಂಸ್ಕೃತಿ, ನಾಗರಿಕತೆ, ಜ್ಞಾನ ಹೊಂದಿರುವ ದೇಶ ನಮ್ಮದು. ಇತರೆ ರಾಷ್ಟ್ರಗಳಿಗೆ ಜ್ಞಾನ, ಅಕ್ಷರ ದಾಸೋಹ, ಜೀವ ವೈವಿಧ್ಯತೆ ಕೊಟ್ಟಿರುವ ದೇಶ ನಮ್ಮದಾಗಿದೆ. ಜಗತ್ತಿನ ಶೇ.8ರಷ್ಟು ಜೈವಿಕ ವೈವಿಧ್ಯತೆ ಹೊಂದಿರುವ ದೇಶ ಭಾರತ. ಈ ಹಿನ್ನೆಲೆ ಇಡೀ ಜಗತ್ತಿನಲ್ಲೇ ಭರತ ಖಂಡ ಹಾಗೂ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಮಾತ್ರ ಮೊದಲು ಕೃಷಿ ಪ್ರಾರಂಭವಾಗಿದೆ ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಮಾತನಾಡಿ, ರೈತರು ತಿನ್ನುವ ಆಹಾರ ಬೆಳೆಯಬೇಕೆ ವಿನಹ ಬಾಯಿಯಲ್ಲಿ ಹಾಕಿಕೊಂಡು ಅಗೆದು ಉಗುಳುವ ಆಹಾರ ಬೆಳೆಯಬಾರದು. ಅಡಿಕೆ ರೈತರ ಆರ್ಥಿಕ ನೀತಿ ಏರುಪೇರು ಮಾಡುತ್ತಿದೆ. ಈ ಬೆಳೆ ಬೆಳೆಯುವವರು ರೈತರೇ ಅಲ್ಲ. ಉತ್ತಮ ಬೆಳೆ ಬೆಳೆದು ತಾನೂ ಉಂಡು, ಇತರರಿಗೂ ಒಳ್ಳೆಯ ಬೆಳೆ ಕೊಡಬೇಕು, ಅವನೇ ಉತ್ತಮ ರೈತ. ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗಬೇಕು. ಕರ್ನಾಟಕ ಕೃಷಿ ಬೆಲೆ ಆಯೋಗ ಕೊಟ್ಟಿರುವ ವರದಿ ಜಾರಿಯಾಗಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಕೃಷಿ ಭಾಗ್ಯ ಯೋಜನೆ ಮರು ಜಾರಿ ಕುರಿತ ಕರಪತ್ರ ಬಿಡುಗಡೆ ಮಾಡಲಾಯಿತು.
ಚಳ್ಳಕೆರೆ ತಾಲೂಕಿನ ದೇವರ ಮರಿಕುಂಟೆ ಗ್ರಾಮದ ಪ್ರಗತಿಪರ ರೈತ ಆರ್.ಎ.ದಯಾನಂದ ಮೂರ್ತಿ ಅವರ ಮಾರ್ಗದರ್ಶಿ ಪುಸ್ತಕ ಲೋಕಾರ್ಪಣೆ ಗೊಳಿಸಲಾಯಿತು. ಜಿಲ್ಲೆಯ ಆರೂ ತಾಲೂಕುಗಳ ಹತ್ತು ಮಂದಿ ಹಾಗೂ ಚಿತ್ರದುರ್ಗ ತಾಲೂಕಿನ ಐವರು ಸಾಧಕ ರೈತರನ್ನು ಸನ್ಮಾನಿಸಲಾಯಿತು. ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷ ಧನಂಜಯ, ಪ್ರಗತಿಪರ ಕೃಷಿಕ ಆರ್.ಎ.ದಯಾನಂದಮೂರ್ತಿ, ಡಿಎಸ್ ಹಳ್ಳಿ ರೈತ ಜ್ಞಾನೇಶ್ವರ್ ಮಾತನಾಡಿದರು. ಬೇಲೂರಿನ ಪ್ರಸಿದ್ಧ ಅಂಕಣಕಾರ ಪೂರ್ಣಪ್ರಜ್ಞಾ ಉಪನ್ಯಾಸ ನೀಡಿದರು.ಹಿರಿಯೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓ.ಕುಮಾರ, ರೈತ ಸಂಘದ ಮುಖಂಡ ಕೆ.ಸಿ ಹೊರಕೇರಪ್ಪ, ಡಿಎಸ್ ಹಳ್ಳಿ ಮಲ್ಲಿಕಾರ್ಜುನ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಸಿದ್ದಪ್ಪ, ತುರುವನೂರಿನ ಮಂಜುನಾಥ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಎಸ್.ವಿ.ನಾಗರಾಜ್, ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಜಿ.ಸಿ.ರಂಗಸ್ವಾಮಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಶಿವಣ್ಣ, ಕೃಷಿ ಉಪನಿರ್ದೇಶಕ ಶಿವಕುಮಾರ್, ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ವೀರಭದ್ರರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.