ಭೀಕರ ಬರಕ್ಕೆ ಬೆದರಿ ಗುಳೆ ಹೊರಟ ರೈತರು

KannadaprabhaNewsNetwork |  
Published : Jul 25, 2026, 02:30 AM IST
ಮಳೆ ಇಲ್ಲದೇ ಬತ್ತಿದ ಬೆಳೆಗಳ ಮದ್ಯೆಯೂ  ಮಹಿಳೆಯೊಬ್ಬಳು ಕಳೆ ತೆಗೆಯುತ್ತಾ ಮಳೆರಾಯನಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವುದು | Kannada Prabha

ಸಾರಾಂಶ

ಗುಳೆ ಹೋದವರ ಮಕ್ಕಳ ವಿದ್ಯಾಭ್ಯಾಸವೂ ಅತಂತ್ರ ಪರಿಸ್ಥಿತಿಯಲ್ಲಿದ್ದು, ಅವರ ಭವಿಷ್ಯಕ್ಕೆ ಆಸರೆಯಾಗುವವರಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ತಾಲೂಕಿನ ತಾಂಡಾಗಳಲ್ಲಿ ರೈತರು, ಕೂಲಿಕಾರ್ಮಿಕರು ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ಕಡೆ ಗುಳೆ ಹೋಗುತ್ತಿದ್ದಾರೆ. ತಾಂಡಾಗಳು ಅಲ್ಲದೇ ನೂರಾರು ಹಳ್ಳಿಗಳಿಂದ ಯುವಕರು ತಮ್ಮ ವೖತ್ತಿಯನ್ನು ಆಧರಿಸಿ ವಿವಿಧೆಡೆ ವಲಸೆ ಹೋಗಿ ಊರಲ್ಲಿಯ ತನ್ನ ಕುಟುಂಬವನ್ನು ಸಾಕಲು ಮುಂದಾಗಿದ್ದಾರೆ.

ಗುಳೆ ಹೋದವರ ಮಕ್ಕಳ ವಿದ್ಯಾಭ್ಯಾಸವೂ ಅತಂತ್ರ ಪರಿಸ್ಥಿತಿಯಲ್ಲಿದ್ದು, ಅವರ ಭವಿಷ್ಯಕ್ಕೆ ಆಸರೆಯಾಗುವವರಾರು ಎಂಬುದು ಯಕ್ಷಪ್ರಶ್ನೆಯಾಗಿದೆ. ತಾಲೂಕಿನಲ್ಲಿ 47,915 ಹೆಕ್ಟೇರ್ ಬಿತ್ತನೆ ಗುರಿ ಇತ್ತು. ಆದರೆ ಕೇವಲ 14,194 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಇದರಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಳೆ ಇಲ್ಲದೇ ಬಾಡಿ ಹೋಗಿದೆ ಎಂದು ಕೖಷಿ ಇಲಾಖೆಯೇ ಸಮೀಕ್ಷೆ ಮಾಡಿದೆ. ತಾಲೂಕಿನಲ್ಲಿ ಸಣ್ಣ ಹಿಡುವಳಿ ಇರುವ ರೈತರು ಬಿತ್ತನೆ ಬೀಜ, ಗೊಬ್ಬರ, ರಂಟೆ, ಕುಂಟೆ, ಕೂರಿಗೆ ಕೆಲಸ ಮಾಡಿದ್ದು, ಕಾರ್ಮಿಕರ ಕೂಲಿ ಸೇರಿದಂತೆ ರೈತ ಕುಟುಂಬಗಳು ಲಕ್ಷಗಟ್ಟಲೇ ಹಣ ಕೈ ಸುಟ್ಟುಕೊಂಡು ಮುಗಿಲಿನತ್ತ ನೋಡುತ್ತಿದ್ದಾರೆ. ಈಗ ಮಳೆ ಬಂದರೂ ಬಹುತೇಕ ಮೆಕ್ಕೆಜೋಳ ಮುಂತಾದ ಬೆಳೆಗಳು ಶೇ.80ರಷ್ಟು ಇಳುವರಿ ನಷ್ಟವಾಗಿದೆ. ಶೇ.20ರಷ್ಟು ಮಾತ್ರ ಮಳೆಯಾಶ್ರಿತ ಬೆಳೆ ಬರುವ ಸಾಧ್ಯತೆ ಇದೆ. 33,700 ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ಹಿಂಗಾರು ಮಳೆ ಬಂದರೆ ಮಾತ್ರ ರೈತರ ಬದುಕು ಸ್ವಲ್ಪವಾದರೂ ಹಸನಾಗಬಹುದು.

74 ಕೆರೆಗಳಿಗೆ ನೀರು:

ಈಗಾಗಲೇ ₹640 ಕೋಟಿ ವೆಚ್ಚದಲ್ಲಿ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಳೆದ ವರ್ಷ ಉದ್ಘಾಟನೆಯಾಗಿತ್ತು. ಈ ವರ್ಷ ನೀರು ತುಂಬಿಸಲು ಮಳೆಗಾಲದ ಅವಧಿ ಮುಗಿದಿದೆ ಎಂಬ ಕಾರಣವನ್ನು ನೀಡಿ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ. ಮುಂದಿನ ವರ್ಷ ಮಳೆಗಾಲದಲ್ಲಿ ನೀರು ತುಂಬಿಸಲಾಗುತ್ತದೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಭರವಸೆ ನೀಡಿದ್ದರು. ಈಗ ಆ ಕಾಲ ಬಂದಿದೆ. ತುಂಗಾಭದ್ರಾ ನದಿಯಲ್ಲಿ ನೀರು ಹರಿಯುತ್ತಿದೆ. ಈ ತಿಂಗಳೊಳಗೆ ಕೆರೆಗಳಿಗೆ ನೀರು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕರು 15 ದಿನಗಳ ಹಿಂದೆ ಭರವಸೆ ನೀಡಿದ್ದರು. ಆದರೂ ಇನ್ನೂ ಕೂಡ್ಲಿಗಿ ತಾಲೂಕಿನ ಕೆರೆಗಳಿಗೆ ನೀರು ಬಂದಿಲ್ಲ. ಬರ ಇದ್ದಾಗ ಕೆರೆಗಳಿಗೆ ನೀರು ತುಂಬಿದರೆ ಮಾತ್ರ ಯೋಜನೆ ರೈತರಿಗೆ ವರವಾಗುತ್ತದೆ. ಮಳೆಗಾಲ ಹೆಚ್ಚಾದಾಗ ಕೆರೆಗಳಿಗೆ ನೀರು ತುಂಬಿದರೆ ಉಪಯೋಗ ಅಷ್ಟಕ್ಕಷ್ಟೇ ಎನ್ನುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ.

ಇಂತಹ ಬರ ನೋಡಿಲ್ಲ

ಇಂತಹ ಬರ ನಾನು ನೋಡಿಯೇ ಇಲ್ಲ. ತಿಂಗಳುಗಟ್ಟಲೇ ಮಳೆ ಇಲ್ಲದೇ ಬಿತ್ತಿದ ಬೀಜಗಳು ಹೇಗೇ ಮೊಳಕೆ ಒಡೆದಾವು ಹೇಳಿ? ಮೂರ್ನಾಲ್ಕು ಎಕರೆ ಇರುವ ರೈತರು ರಂಟೆ- ಕುಂಟೆ ಹೊಡೆಸಿ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಆಳು ಖರ್ಚು ಸೇರಿದರೆ ಅಂದಾಜು ಒಂದು ಲಕ್ಷ ರು. ಖರ್ಚಾಗುತ್ತದೆ. ರೈತರ ಬವಣೆ ಕೇಳುವವರು ಯಾರು? ಬೆಳೆ ಪರಿಹಾರ ಸಿಗುವುದು ಅಷ್ಟಕ್ಕಷ್ಟೇ. ರೈತರು ಬಿತ್ತನೆ ಮಾಡಿದ ಸಾಲ ತೀರಿಸಲು ಮಲೆನಾಡು ಕಡೆ ಗುಳೆ ಹೊರಟಿದ್ದಾರೆ. 74 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಶಾಸಕರು ಮಾಡಬೇಕಿದೆ. ಇಲ್ಲದಿದ್ದರೆ ರೈತರಿಗೆ, ಜನ-ಜಾನುವಾರುಗಳಿಗೆ ಕಾಡುಪ್ರಾಣಿಗಳಿಗೆ ಈ ಬಾರಿ ಬೇಸಿಗೆಯಲ್ಲಿ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ಆಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕಿನ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ.

ಹೆಂಡ್ತಿ, ಮಕ್ಕಳು ಸಮೇತ ಗುಳೆ ಹೋಗಿದ್ದೇವೆ. ನಮ್ಗೆ ಇಲ್ಲಿ ಕೆಲಸ ಸಿಗುತ್ತಿಲ್ಲ. ಹೀಗಾಗಿ ನಾವು ನಮ್ಮ ಮಕ್ಕಳ ಮದುವೆ, ಹಬ್ಬ ಹರಿದಿನಗಳ ಸಾಲ ತೀರಿಸಲು, ಆಸ್ಪತ್ರೆ ಚಿಕಿತ್ಸೆ ಹಾಗೂ ನಮ್ಮ ದಿನನಿತ್ಯದ ಖರ್ಚಿಗೆ ಮಂಗಳೂರು, ಬೆಂಗಳೂರಿಗೆ ಹೋಗಿ ದುಡಿತ್ತಿದ್ದೀವಿ ಎನ್ನುತ್ತಾರೆ ಶ್ರೀಕಂಠಾಪುರ ತಾಂಡಾ ವೆಂಕಟೇಶ್ ನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಮತದಾರರ ಪಟ್ಟಿ ಅ.19ರಂದು ಪ್ರಕಟ: ಡಿಸಿ
ಕೇಂದ್ರ ಕಾರಾಗೃಹದಲ್ಲಿ ಕನ್ನಡಗೀತೆಗಳ ಗಾಯನ