ಕನಕಗಿರಿ: ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ,ನೀಟ್ ಪರೀಕ್ಷೆ ಹಾಗೂ ಎನ್‌ಟಿಎ ರದ್ದುಗೊಳಿಸುವುದು ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದೇಶಾದ್ಯಂತ ಶುಕ್ರವಾರ ಕರೆಯಲಾಗಿದ್ದ ಮುಷ್ಕರದ ಭಾಗವಾಗಿ ಪಟ್ಟಣದಲ್ಲಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ತಾಲೂಕಾಧ್ಯಕ್ಷ ಹನುಮೇಶ್ ಮ್ಯಾಗೆಡೆ ಮಾತನಾಡಿ, ಸೋನಂ ವಾಂಗ್ಚುಕ್ ೨೦ದಿನಗಳಿಂದ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಅನೇಕ ವಿದ್ಯಾರ್ಥಿ ಸಹ ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾಕಾರರೊಂದಿಗೆ ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಸಂವಾದ ನಡೆಸುವ ಬದಲು ಕೇಂದ್ರ ಸರ್ಕಾರ ಪೊಲೀಸ್ ಕ್ರಮದ ಮೂಲಕ ಭಿನ್ನಾಭಿಪ್ರಾಯ ಹತ್ತಿಕ್ಕುವ ಮಾರ್ಗ ಆಯ್ಕೆ ಮಾಡಿಕೊಂಡಿದೆ ಎಂದು ದೂರಿದರಲ್ಲದೆ ವಿದ್ಯಾರ್ಥಿಗಳ ಪಾರ್ಲಿಮೆಂಟ್ ಚಲೋದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಹಾಗೂ ಅಶ್ರವಾಯು ಬಲ ಪ್ರಯೋಗ ಖಂಡನೀಯ ಎಂದರು.
ಪ್ರಶ್ನೆ ಪತ್ರಿಕೆ ಲೀಕ್ ಹಗರಣದ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮವಾಗಬೇಕು. ಬಾಧಿತ ವಿದ್ಯಾರ್ಥಿಗಳ ಕುಟುಂಬಕ್ಕೆ ನ್ಯಾಯ ಸಮ್ಮತ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪಿಐ ವಿ. ನಾರಾಯಣ, ವಿಶ್ವನಾಥ ಹಿರೇಗೌಡ್ರ, ವಿದ್ಯಾರ್ಥಿಗಳಾದ ಕನಕಾಚಲ ಯಾದವ್, ಪ್ರಶಾಂತ, ಪ್ರಕಾಶ್ ಪಾರ್ವತಿ, ಜ್ಯೋತಿ, ಪ್ರಕಾಶ್, ದಿವ್ಯಾ, ದುರಗಮ್ಮ, ಅನಿತಾ, ನೂರು ಜಾನ್, ಸಿಐಟಿಯು ತಾಲೂಕಾಧ್ಯಕ್ಷ ಮಲ್ಲಪ್ಪ ಮ್ಯಾಗಡೆ, ಕಾರ್ಯದರ್ಶಿ ಪರಶುರಾಮ, ಮೌಲಾಹುಸೇನ, ಶಿವಪ್ಪ, ವೆಂಕಟೇಶ ಬಾವಿಕಟ್ಟಿ, ನಿಂಗಪ್ಪ, ಹುಸೇನಪ್ಪ, ಹೊನ್ನೂರುಸಾಬ್, ಹನುಮಂತ, ಮರಿಯಪ್ಪ, ಹೊನ್ನಪ್ಪ ಮಡಿವಾಳ ಇತರರು ಇದ್ದರು.