ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಎರಡು ದಿನಗಳ ಈ ಅಕ್ಷರ ಜಾತ್ರೆಯಲ್ಲಿ ಖ್ಯಾತ ಸಾಹಿತಿ, ಸಂಶೋಧಕರು, ಜನಪ್ರತಿನಿಧಿ, ಕಲಾವಿದರು ಹಾಗೂ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಲಿದ್ದು, ಹಿರೇಮನ್ನಾಪುರ ಅಕ್ಷರಗಳ ರಾಜಧಾನಿಯಾಗಿ ಕಂಗೊಳಿಸಲಿದೆ.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೋಲಿಸಪಾಟೀಲ ಪರಿಷತ್ ಧ್ವಜಾರೋಹಣ, ಶಾಸಕ ದೊಡ್ಡನಗೌಡ ಪಾಟೀಲ ರಾಷ್ಟ್ರಧ್ವಜಾರೋಹಣ, ಕಸಾಪ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಕನ್ನಡ ಧ್ವಜಾರೋಹಣ ಮಾಡುವವರು.ನಂತರ ಕಲಾತಂಡ, ಶಾಲಾ ವಿದ್ಯಾರ್ಥಿ, ಸಂಘಟನೆ, ಗ್ರಾಮಸ್ಥರ ಸಮ್ಮುಖದಲ್ಲಿ ಸಮ್ಮೇಳನಾಧ್ಯಕ್ಷ ಶೇಖರಗೌಡ ಮಾಲಿಪಾಟೀಲರ ಮೆರವಣಿಗೆ ಹಿರೇಮನ್ನಾಪೂರು ಗ್ರಾಮದ ಪ್ರಾಥಮಿಕ ಕೃಷಿಕ ಪತ್ತಿನ ಸಹಕಾರ ಸಂಘದಿಂದ ಪ್ರಾರಂಭವಾಗಿ ಮಾರುತೇಶ್ವರ ದೇವಸ್ಥಾನ, ದುರ್ಗಾದೇವಿ ದೇವಸ್ಥಾನ, ಪ್ರಮುಖ ಬೀದಿಗಳ ಮೂಲಕ ಗವಿಸಿದ್ಧೇಶ್ವರ ಶಾಲಾ ಆವರಣದಲ್ಲಿರುವ ಮುಖ್ಯ ವೇದಿಕೆ ತಲುಪಲಿದೆ. ಈ ಮೆರವಣಿಗೆಯಲ್ಲಿ ವಿಶೇಷವಾಗಿ 200 ಮೀಟರ್ ಕನ್ನಡ ಧ್ವಜ ಮೆರವಣಿಗೆ ನಡೆಯಲಿದೆ.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಸ್ವಾಗತ ಭಾಷಣ ಮಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಧ್ವಜ ಹಸ್ತಾಂತರ ಮಾಡಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಮಶಿವಮೂರ್ತಿ ಸಮ್ಮೇಳನಾಧ್ಯಕ್ಷರ ನುಡಿಹೊತ್ತಿಗೆ ಬಿಡುಗಡೆ ಮಾಡಲಿದ್ದು, ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಲಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷೀಯ ಭಾಷಣ ಮಾಡಲಿದ್ದು, ಪ್ರೊ.ಎಸ್.ಜಿ. ಸಿದ್ದರಾಮಯ್ಯ ವಿವಿಧ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ವೈಚಾರಿಕ ಗೋಷ್ಠಿಗಳ ಮೆರುಗು: ಎರಡು ದಿನಗಳ ಸಮ್ಮೇಳನದಲ್ಲಿ ಸಂಕೀರ್ಣ ಗೋಷ್ಠಿ, ಸಮಕಾಲೀನ ಸವಾಲುಗಳು, ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ, ಕವಿಗೋಷ್ಠಿ, ನೆಲಮೂಲ ಸಂಸ್ಕೃತಿ, ಬಯಲಾಟ ಪರಂಪರೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತ ವಿಚಾರಗೋಷ್ಠಿಗಳು ನಡೆಯಲಿವೆ. ಖ್ಯಾತ ಸಾಹಿತಿಗಳು, ಸಂಶೋಧಕರು ಮತ್ತು ಚಿಂತಕರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರೋಪಕ್ಕೆ ಸಿದ್ದು ಯಾಪಲಪರ್ವಿ: ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಸಿದ್ದು ಯಾಪಲಪರ್ವಿ ಸಮಾರೋಪ ನುಡಿ ನೀಡಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಸಾಹಿತ್ಯ, ಸಂಸ್ಕೃತಿ, ಜನಪದ, ಕಲೆ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮವಾಗಿರುವ ಈ ಎರಡು ದಿನಗಳ ಅಕ್ಷರ ಜಾತ್ರೆ ಕೊಪ್ಪಳ ಜಿಲ್ಲೆಯ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ದಾಖಲಾಗುವ ನಿರೀಕ್ಷೆ ಮೂಡಿಸಿದೆ.