ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ರಾಷ್ಟ್ರಭಕ್ತಿಯ ಜ್ವಾಲೆ ಉರಿಯುವಂತೆ ಮಾಡಿದ್ದು, ಜನರನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು.
ಕಂಪ್ಲಿ; ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ಮಾಧ್ಯಮವು ಕೇವಲ ಮಾಹಿತಿ ನೀಡುವ ಸಾಧನವಲ್ಲ, ಅದು ಸಮಾಜದ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸುದ್ದಿಗಳನ್ನು ಪ್ರಕಟಿಸುವ ಮೊದಲು ಸಮಗ್ರ ಪರಿಶೀಲನೆ ನಡೆಸಿ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಪತ್ರಕರ್ತರು ನಿರ್ವಹಿಸಬೇಕು ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.ಪಟ್ಟಣದ ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕವು ಶುಕ್ರವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕೆಗಳು ರಾಷ್ಟ್ರಭಕ್ತಿಯ ಜ್ವಾಲೆ ಉರಿಯುವಂತೆ ಮಾಡಿದ್ದು, ಜನರನ್ನು ಒಗ್ಗೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯನಂತರ ಪತ್ರಿಕೋದ್ಯಮದ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿ ಎಂದಿಗೂ ಕಡಿಮೆಯಾಗಿಲ್ಲ. ಪ್ರಚಲಿತ ವಿದ್ಯಮಾನಗಳ ಅರಿವು ಮೂಡಿಸುವಲ್ಲಿ ಹಾಗೂ ಜ್ಞಾನ ವೃದ್ಧಿಯಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಮಾತನಾಡಿ ಕರ್ನಾಟಕದಲ್ಲಿ ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ಐತಿಹಾಸಿಕ ಹಿನ್ನೆಲೆ ಇದ್ದು, ಮಂಗಳೂರು ಸಮಾಚಾರದಿಂದ ಆರಂಭವಾದ ಪತ್ರಿಕಾ ಪರಂಪರೆ ಬಳ್ಳಾರಿ ಭಾಗದಲ್ಲಿಯೂ ಮಹತ್ವದ ಬೆಳವಣಿಗೆ ಕಂಡಿದೆ ಎಂದರು.
ನವ ಭಾರತ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ನಾಗೇಶ್ವರ ರಾವ್ ಮಾತನಾಡಿ, ಸಂವಹನ ಮತ್ತು ಸಂಪರ್ಕ ಮಾಧ್ಯಮಗಳ ಸ್ವರೂಪ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬಂದಿದ್ದರೂ ಖಚಿತ ಹಾಗೂ ವಿಶ್ವಾಸಾರ್ಹ ಮಾಹಿತಿಗಾಗಿ ದಿನಪತ್ರಿಕೆಗಳೇ ಉತ್ತಮ ಮೂಲವಾಗಿವೆ ಎಂದರು.
ವಿದ್ಯಾರ್ಥಿಗಳು ಪತ್ರಿಕೆಗಳ ಸಂಪಾದಕೀಯ ಅಂಕಣಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಭಾಷಾ ಜ್ಞಾನ, ಬರವಣಿಗೆ ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನೆ ವೃದ್ಧಿಯಾಗುತ್ತದೆ. ದೇಶ-ವಿದೇಶದ ಬೆಳವಣಿಗೆಗಳು, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳ ಕುರಿತು ಸಮಗ್ರ ಅರಿವು ಪತ್ರಿಕೆಗಳಿಂದ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಪತ್ರಿಕೆಗಳನ್ನು ಕೇವಲ ಮನರಂಜನೆಗಾಗಿ ಬಳಸದೇ ಅಧ್ಯಯನದ ಭಾಗವಾಗಿ ಸದ್ಬಳಕೆ ಮಾಡಿಕೊಂಡರೆ ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಬಿ.ಸಾಯಿನಿಧಿ, ಆರ್. ಹರ್ಷಿಣಿ, ವಿನುತಾ ಸೊಪ್ಪಿನಮಠ, ನಸ್ರೀನ್ ತಾಜ್ ಹಾಗೂ ಅಭಿನಂದನ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ದೈಹಿಕ ಶಿಕ್ಷಕರಾಗಿ ಎಂ.ಎನ್. ಶರಣಬಸವರಾಜ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಹರನಹಳ್ಳಿ, ವಿದ್ಯಾಸಾಗರ ಇಂಟರ್‌ನ್ಯಾಷನಲ್ ಸ್ಕೂಲ್ ಪ್ರಾಚಾರ್ಯೆ ರೋಹಿಣಿ ಸಾಯಿಕಿಶೋರ್, ಅಧಿಕಾರಿಗಳಾದ ಬಸವರಾಜ, ಶಂಭುಲಿಂಗ, ಗುರುಪ್ರಸಾದ್, ಟಿ.ಎಂ. ಬಸವರಾಜ, ಜಿಲ್ಲಾ ಕಾರ್ಯದರ್ಶಿ ದ್ಯಾಮನಗೌಡ ಪಾಟೀಲ್, ಜಿಲ್ಲಾ ಸದಸ್ಯ ಜಿ. ಚಂದ್ರಶೇಖರಗೌಡ, ತಾಲೂಕು ಕಾರ್ಯದರ್ಶಿ ಪಿ. ವೀರೇಶ್, ತಾಲೂಕು ಘಟಕದ ಪದಾಧಿಕಾರಿಗಳಾದ ಕರಿ ವಿರುಪಾಕ್ಷಿ, ಎಸ್. ಯಮನಪ್ಪ, ಜೀರು ಗಾದಿಲಿಂಗ, ಎಂ.ಎಸ್. ವಿರುಪಾಕ್ಷಯ್ಯ, ಎಚ್.ಎಂ. ಪಂಡಿತಾರಾಧ್ಯ, ಬಿ. ರಸೂಲ್, ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ ಸೇರಿದಂತೆ ಪತ್ರಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.