ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆಯಿಂದ ಹಾಗೂ 2025-26 ನೇ ಸಾಲಿನ ಜಿಲ್ಲಾ ಪಂಚಾಯ್ತಿ ಯೋಜನೆಯಡಿ ನಡೆದ ಪ್ರಗತಿಪರ ರೈತರಿಗೆ ಸಮಗ್ರ ಕೃಷಿ ಪದ್ಧತಿ, ಹನಿ ನೀರಾವರಿ ಅಳವಡಿಕೆ ಹಾಗೂ ವಿವಿಧ ಬೆಳೆಗಳ ಕೋಯ್ಲೋತ್ತರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಣ್ಣಿನ ಫಲವತ್ತತೆ, ನೀರಿನ ಸೌಲಭ್ಯ ಉತ್ತಮವಾಗಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬ ರೈತರು ಒಂದೇ ರೀತಿಯ ಬೆಳೆಗಳನ್ನು ಬೆಳೆಯದೆ ಇತರೆ ಲಾಭದಾಯಕ ಬೆಳೆಗಳನ್ನು ಸಹ ಬೆಳೆಯುವಂತೆ ಕಿವಿಮಾತು ಹೇಳಿದರು.ರೈತರು ಉದ್ದಿಮೆದಾರರಾಗಬೇಕು, ಆರ್ಥಿಕವಾಗಿ ಸದೃಢರಾಗುವಂತೆ ಮಾಡಲು ಕಾರ್ಯಾಗಾರ ಆಯೋಜಿಸಲಾಗಿದೆ. ಯಾವ ಮಣ್ಣಿಗೆ ಯಾವ ಬೆಳೆ ಬೆಳೆಯಬೇಕು, ಯಾವ ವರ್ತಮಾನದಲ್ಲಿ ಯಾವ ಬೆಳೆ ಉತ್ತಮ, ಯಾವುದು ಲಾಭದಾಯಕ ಎಂಬುದನ್ನು ಅರಿತು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮೀನು ಅರೋಗ್ಯಕರ ಆಹಾರ. ಆದರೆ, ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಕಡಿಮೆಯಿದೆ. ರೈತ ಮಹಿಳೆಯರಿಗೆ ಸ್ವ-ಸಹಾಯ ಸಂಘಗಳ ಮೂಲಕ ಮೀನುಗಾರಿಕೆ ಕುರಿತು ತರಬೇತಿ ನೀಡಿ ಹಾಗೂ ಮೀನು ಮಾರಾಟ ಮಳಿಗೆಗಳನ್ನು ತೆರೆಯಲು ಲೈಸನ್ಸ್ ಸೇರಿದಂತೆ ಇತರೆ ಸಹಾಯಗಳನ್ನು ದೊರಕಿಸಿಕೊಡಲು ಮುಂದಾಗುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಜಿಲ್ಲಾ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ರೈತರ ಕಷ್ಟವನ್ನು ನೀಗಿಸಲು ಮತ್ತು ರೈತರು ಉದ್ದಿಮೆದಾರರಾಗಲು ಸಲಹೆಗಳನ್ನು ನೀಡಿ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತೋಟಗಾರಿಕೆ, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಹಿತ್ತಲಮಣಿ ಮಾತನಾಡಿ, ರೈತರು ದೇಶದ ಜನರು ಹಸಿವು ನೀಗಿಸುವವರು. ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದರು.