ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿಯನ್ನು ಅವೈಜ್ಞಾನಿಕವಾಗಿ ಹರಾಜು ಮಾಡುತ್ತಿರುವ ಹಾಗೂ ರೈತರಿಗೆ ಕೈಕೋಳ ಹಾಕಿಸಿ ಜೈಲಿಗೆ ಕಳುಹಿಸಿರುವುದನ್ನು ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಕನಕಗಿರಿಯಲ್ಲಿ ಮನವಿ ಸಲ್ಲಿಸಿದರು.
ಕನಕಗಿರಿ: ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿಯನ್ನು ಅವೈಜ್ಞಾನಿಕವಾಗಿ ಹರಾಜು ಮಾಡುತ್ತಿರುವ ಹಾಗೂ ರೈತರಿಗೆ ಕೈಕೋಳ ಹಾಕಿಸಿ ಜೈಲಿಗೆ ಕಳುಹಿಸಿರುವುದನ್ನು ಖಂಡಿಸಿ ಕೋಡಿಹಳ್ಳಿ ಚಂದ್ರಶೇಖರ ಬಣದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎನ್ನುವ ಶಬ್ದವನ್ನು ಸರ್ಕಾರಗಳು ರಾಜಕೀಯ ತೀಟೆಗೆ ಬಳಸಿಕೊಳ್ಳುತ್ತಿವೆ. ರೈತರ ಹಿತಕ್ಕಾಗಿ ಕಾಯ್ದೆ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ. ರಾಜ್ಯ ಮತ್ತು ದೇಶದ ಹಲವು ಕಾರ್ಪೊರೇಟ್ ಕಂಪನಿಗಳ ಮಾಲೀಕರು ಕೋಟಿಗಟ್ಟಲೆ ಸಾಲವನ್ನು ಮಾಡಿ, ದೇಶ ಬಿಟ್ಟು ಹೋದವರ ಸಾಲವನ್ನು ತಾನೇ ಬ್ಯಾಂಕಿಗೆ ಮರು ಪಾವತಿಸಿ ಅವರನ್ನು ರಕ್ಷಣೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಆದರೆ ತಾಲೂಕಿನ ಸೋಮಸಾಗರದ ರೈತರು ಹೈನುಗಾರಿಕೆ, ಕೃಷಿ ಮತ್ತು ಕೃಷಿ ಉಪಕರಣಗಳ ಮೇಲೆ ₹6 ಲಕ್ಷ ಸಾಲ ಪಡೆದಿದ್ದು, ಸಾಲ ಕಟ್ಟಲೇಬೇಕು ಎಂದಿರುವ ಗಂಗಾವತಿಯ ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಕೋರ್ಟ್ ಮೂಲಕ ನೋಟಿಸ್ ನೀಡಿ, ರೈತ ಜಗದೀಶಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದಾರೆ. ಈ ರೀತಿಯ ಘಟನೆಗಳು, ದೌರ್ಜನ್ಯಗಳು ರೈತರ ಮೇಲೆ ಆಗುತ್ತಿರುವುದನ್ನು ಸರ್ಕಾರ ತಡೆಯಬೇಕು ಎಂದರು.
ಬ್ಯಾಂಕುಗಳು ರೈತರ ಮೇಲೆ ನಡೆಸುವ ಕುತಂತ್ರಗಳು ಅಮಾನವೀಯವಾಗಿದ್ದು, ತಾಲೂಕಿನ 38 ರೈತರಿಗೆ ನ್ಯಾಯಾಲಯದ ಮೂಲಕ ವಾರೆಂಟ್ ನೀಡಿ ಅಕ್ರಮವಾಗಿ ಭೂಮಿಯನ್ನು ಹರಾಜು ಮಾಡುತ್ತಿರುವುದು ಮತ್ತು ಜೈಲಿಗೆ ಕಳುಹಿಸಲು ಕಾರಣೀಕರ್ತರಾದವನ್ನು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಭೀಮನಗೌಡ ಗುಡದೂರು, ರೈತ ಮುಖಂಡರಾದ ಹನುಮಂತ ಬಂಡ್ರಾಳ್, ಶಿವಕುಮಾರ ಬಡಿಗೇರ, ವೆಂಕಟೇಶ ಮಲ್ಲಿಗೆವಾಡ, ಸಣ್ಣ ಶೇಖರಪ್ಪ ಗದ್ದಿ, ಹನುಮೇಶ ಪೂಜಾರಿ, ಹನುಮಂತ ಹೊಸ್ಕೇರಿ, ಕನಕಪ್ಪ ಗುಡದೂರು, ವೆಂಕಣ್ಣ ಉಮಳಿ ಕಾಟಾಪುರ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.