ಮಳೆಗೆ ರೈತ ಸಂತಸ, ನಗರದಲ್ಲಿ ಅವಾಂತರ

KannadaprabhaNewsNetwork |  
Published : Jul 06, 2026, 03:00 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ರೈತರು ಸಂತಸಗೊಂಡಿದ್ದಾರೆ. ಜೂನ್‌ನಲ್ಲಿ ಕೈಕೊಟ್ಟಿದ್ದ ಮುಂಗಾರು ಚೇತರಿಸಿಕೊಂಡಿದ್ದು, ಬತ್ತಿದ್ದ ನದಿ, ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಅಲ್ಲದೇ, ಮಳೆಯಿಂದ ನಗರದಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಜನರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ನಗರ ಸೇರಿದಂತೆ ಜಿಲ್ಲಾದ್ಯಂತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ರೈತರು ಸಂತಸಗೊಂಡಿದ್ದಾರೆ. ಜೂನ್‌ನಲ್ಲಿ ಕೈಕೊಟ್ಟಿದ್ದ ಮುಂಗಾರು ಚೇತರಿಸಿಕೊಂಡಿದ್ದು, ಬತ್ತಿದ್ದ ನದಿ, ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಅಲ್ಲದೇ, ಮಳೆಯಿಂದ ನಗರದಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಜನರು ಪರದಾಡುವಂತಾಗಿದೆ.ರೈತರ ಮೊಗದಲ್ಲಿ ಮಂದಹಾಸ

ಜೂನ್‌ನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂಧಗಂಗಾ, ವೇದಗಂಗಾ ಎಂಬ ಸಪ್ತ ನದಿಗಳು ಖಾಲಿಯಾಗಿದ್ದವು. ಮಲಪ್ರಭಾ, ಹಿಡಕಲ್, ರಾಕಸಕೊಪ್ಪ ಜಲಾಶಯಗಳಲ್ಲೂ ನೀರಿನ ಅಭಾವದಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿತ್ತು.

ಮಳೆ ಬರುತ್ತದೆ ಎಂಬ ಆಶಯದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದ ರೈತರ ಬೆಳೆಗಳು ಒಣಗುವ ಹಂತ ತಲುಪಿದ್ದವು. ಕಳೆದ ಮೂರು ದಿನಗಳ ಉತ್ತಮ ಮಳೆಯಿಂದ ಒಣಗುತ್ತಿದ್ದ ಬೆಳೆಗಳಿಗೆ ಜೀವ ಕಳೆ ಬಂದಿದೆ. ಇದರಿಂದ ರೈತಾಪಿ ವರ್ಗ ಹರ್ಷಗೊಂಡಿದೆ. ಖಾನಾಪುರ ಅರಣ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಕೃಷ್ಣಾ ನದಿಗೆ 15 ಸಾವಿರ ಕ್ಯೂಸೆಕ್, ಹಿಡಕಲ್ ಜಲಾಶಯಕ್ಕೆ 1600 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದರೆ ಜಿಲ್ಲೆಯ ನದಿಗಳು ಮತ್ತಷ್ಟು ತುಂಬುವ ಭರವಸೆಯಿದೆ.ಘಟಪ್ರಭಾ, ವೇದಗಂಗಾ ಹೆಚ್ಚಿನ ಒಳಹರಿವು

ನದಿಗಳ ಪಾತ್ರದಲ್ಲಿ ಭಾನುವಾರವೂ ಮಳೆ ಮುಂದುವರಿದಿದ್ದು, ಸಪ್ತ ನದಿಗಳು ಉಕ್ಕಿ ಹರಿಯುತ್ತಿವೆ. ಮಹಾರಾಷ್ಟ್ರದಲ್ಲಿ ವರುಣ ಆರ್ಭಟದಿಂದ ವೇದಗಂಗಾ, ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿವೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ಬಾರವಾಡ-ಕನ್ನೂರ, ಭೋಜವಾಡಿ-ಗಜವರವಾಡಿ ಮೂರು ಸೇತುವೆಗಳು ಮುಳುಗಿವೆ. ಈ ನದಿಗಳಿಗೆ ಯಾರೂ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಘಟಪ್ರಭಾ ನದಿಯ ಹರಿವು ಹೆಚ್ಚಿದ್ದು, ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ನೀರಿನ ಮಟ್ಟ ಒಂದೇ ದಿನದಲ್ಲಿ ಒಂದೂವರೆ ಅಡಿ ಏರಿಕೆಯಾಗಿ 2,094 ಅಡಿಗೆ ತಲುಪಿದೆ. ಒಳಹರಿವು 1,661 ಕ್ಯೂಸೆಕ್‌ನಿಂದ 5,377 ಕ್ಯೂಸೆಕ್‌ಗೆ ಹೆಚ್ಚಿದೆ. ಖಾನಾಪುರ ಅರಣ್ಯದಲ್ಲಿ ಮಳೆ ಜಾಸ್ತಿಯಾಗಿದ್ದು, ಸವದತ್ತಿಯ ನವಿಲುತೀರ್ಥ ಜಲಾಶಯಕ್ಕೆ ಪ್ರಸಕ್ತ ಮುಂಗಾರಿನಲ್ಲಿ ಮೊದಲ ಬಾರಿಗೆ 622 ಕ್ಯೂಸೆಕ್ ಒಳಹರಿವು ಆರಂಭವಾಗಿದೆ.

ಗೋಕಾಕ್ ಫಾಲ್ಸ್‌ಗೆ ಕಳೆ

ಪಶ್ಚಿಮಘಟ್ಟದ ಮಳೆಯಿಂದ ವಿಶ್ವಪ್ರಸಿದ್ಧ ಗೋಕಾಕ್ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ. ಒಂದು ವಾರದ ಹಿಂದೆ ಬತ್ತಿದ್ದ ಫಾಲ್ಸ್‌ನಲ್ಲಿ ಇದೀಗ ಹಾಲ್ನೊರೆಯಂತೆ ನೀರು ಉಕ್ಕುತ್ತಿದೆ. ಈ ಜಲವೈಭವ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.ನಗರದಲ್ಲಿ ಮರ-ಮಳೆ ಅವಾಂತರ

ನಗರದಲ್ಲಿ ಸುರಿದ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಬೆಳಗಾವಿಯ ವೀರಭದ್ರ ನಗರದಲ್ಲಿ ಚರಂಡಿ ಬ್ಲಾಕ್ ಆಗಿ ನಾಲ್ಕು ಮನೆಗಳಿಗೆ ನೀರು ನುಗ್ಗಿ ದವಸ-ಧಾನ್ಯ ಹಾಳಾಗಿದೆ. ಚರಂಡಿ ಸ್ವಚ್ಛಗೊಳಿಸದ ಪಾಲಿಕೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರ ಸಂಜೆಯಿಂದ ಭಾನುವಾರ ಮಧ್ಯಾಹ್ನದವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ 20ಕ್ಕೂ ಅಧಿಕ ಮರಗಳು ಬಿದ್ದಿವೆ. ಇದರಿಂದ ಎರಡು ಮನೆ ಮತ್ತು ಒಂದು ಕಾರು ಹಾನಿಯಾಗಿವೆ ಎಂದು ಪಾಲಿಕೆ ಪರಿಸರ ವಿಭಾಗದ ಎಂಜಿನಿಯರ್ ಹನಮಂತ ಕಲಾದಗಿ ಮಾಹಿತಿ ನೀಡಿದ್ದಾರೆ. ರಸ್ತೆಗೆ ಬಿದ್ದ ಮರಗಳನ್ನು ತೆರವು ಮಾಡುತ್ತಿದ್ದೇವೆ. ಸಿಬ್ಬಂದಿ 24x7 ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಉತ್ತಮ ಮಳೆ

ಬೆಳಗಾವಿ ನಗರದಲ್ಲಿ ತುಂತುರು ಮಳೆಯಾದರೆ, ಖಾನಾಪುರ, ಸಂಕೇಶ್ವರದಲ್ಲಿ ಧಾರಾಕಾರ, ಚನ್ನಮ್ಮನ ಕಿತ್ತೂರಿನಲ್ಲಿ ಉತ್ತಮ ಮಳೆಯಾಗಿದೆ. ರಾಯಬಾಗದಲ್ಲಿ ಗಾಳಿಯೊಂದಿಗೆ ಮಳೆಯಾಗಿದ್ದು, ಹುಕ್ಕೇರಿ, ಸವದತ್ತಿ, ಬೈಲಹೊಂಗಲದಲ್ಲಿ ತುಂತುರು ಮಳೆಯಾಗುತ್ತಿದೆ. ತಡವಾಗಿಯಾದರೂ ಶುರುವಾಗಿರುವ ಮಳೆ ಸಂಕಷ್ಟಕ್ಕೆ ಸಿಲುಕುತ್ತಿದ್ದ ಬೆಳೆಗಳಿಗೆ ಸಂಜೀವಿನಿಯಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿವಿಶೇಷ ಸಮಗ್ರ ಪರಿಷ್ಕರಣೆ ಜಾಗೃತಿ ಜಾಥಾ
ಯುವ ಜನಾಂಗದ ಸ್ಫೂರ್ತಿ ನೀಡಿದ ವಿವೇಕಾನಂದರು