ಕನ್ನಡಪ್ರಭ ವಾರ್ತೆ ವಿಜಯಪುರ
ಸ್ವಾಮಿ ವಿವೇಕಾನಂದರು ಯುವಜನತೆ ಅಸಮಾನತೆ ತೊಡೆದು ಹಾಕುವ ಹಾದಿಯಲ್ಲಿ ನಡೆಯಲು ಪ್ರೇರಕ ಶಕ್ತಿಯಾಗಿದ್ದರು. ಇಂದಿಗೂ ಅವರ ವಿಚಾರಗಳ ಮೂಲಕ ಅವರು ಯುವಜನತೆಯನ್ನು ಎಚ್ಚರಿಸುತ್ತಲೇ ಇದ್ದಾರೆ ಎಂದು ಬಂಜಾರ ಶಿಕ್ಷಣ ಮಾಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಂ. ಪಾಟೀಲ ಹೇಳಿದರು.ನಗರದ ಬಂಜಾರ ಶಿಕ್ಷಣ ಸಂಸ್ಥೆಯ ಬಂಜಾರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಜರುಗಿದ ಮನೆಮನಕ್ಕೂ ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅವರ ವಿಚಾರಗಳ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಬೇರೂರಿರುವ ಅಸಮಾಜನತೆ ಮತ್ತು ಅಜ್ಞಾನವನ್ನು ತೊಡೆದು ಹಾಕೋಣ ಎಂದು ಹೇಳಿದರು.
ಮುಖ್ಯ ಅತಿಥಿ ಉಪನ್ಯಾಸಕ ಮುಸ್ತಾಕ ಹಾದಿಮನಿ ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ಭಾರತ ಸಂಸ್ಕೃತಿಯ ಪ್ರತೀಕ, ಇಂದಿನ ಯುವ ಜನಾಂಗ ಅವರನ್ನು ಅಧ್ಯಯನ ಮಾಡುವುದು ಅವಶ್ಯವಾಗಿದೆ. ಸಮಾಜದ ಒಳಿತಿಗಾಗಿ ವಿವೇಕಾನಂದರ ತತ್ವಗಳು ಪಾಲಿಸುವುದು ಮುಖ್ಯವಾಗಿದೆ. ನಮ್ಮ ಭೌತಿಕ ಉನ್ನತಿ, ಆಧ್ಯಾತ್ಮಿಕ ಮತ್ತು ಭೌತಿಕ ಸಮೃದ್ಧಿಯಲ್ಲಿ ಯುವಕರು ಬೆಳೆಯಲು ಸ್ವಾಮಿ ವಿವೇಕಾನಂದರ ಚಿಂತನೆಗಳು ಅವಶ್ಯವಾಗಿದೆ ಎಂದು ಹೇಳಿದರು.ಕಾಲೇಜಿನ ಉಪಪ್ರಾಚಾರ್ಯ ಟಿ.ಬಿ.ಪವಾರ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರು. ಇವರನ್ನು ಯೋಗಿ, ಭಾರತದ ದೇಶಭಕ್ತ ಸಂತ, ಆಧುನಿಕ ಭಾರತದ ಪ್ರವಾದಿ, ಹೀಗೆ ಹಲವಾರುಹೆಸರುಗಳಿಂದ ಕರೆಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಜೈನಾಪೂರ ಮಾತನಾಡಿ, 2019ರಲ್ಲಿ ಸಮಾಜದಲ್ಲಿ ನೈತಿಕ ಮೌಲ್ಯಗಳು, ರಾಷ್ಟ್ರಪ್ರೇಮ ಹಾಗೂ ಯುವಜನರಲ್ಲಿ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಆರಂಭವಾದ ಈ ಸಂಘಟನೆ ಇಂದು ತನ್ನ 48ನೇ ಮನೆ-ಮನಕ್ಕೂ ವಿವೇಕ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು, ಸಮಾಜದಲ್ಲಿ ಬದಲಾವಣೆ ತರಬೇಕಾದರೆ ಅದು ಯುವ ಮನಸ್ಸುಗಳಿಂದಲೇ ಆರಂಭವಾಗಬೇಕು ಎಂದು ಹೇಳಿದರು.
ಉಪನ್ಯಾಸಕ ಅಮರೇಶ ಸಾಲಕ್ಕಿ, ಸ್ವಾಮಿ ವಿವೇನಂದರ ಜೀವನ ಅವರ ಚಿಂತನೆಗಳು, ಯುವಶಕ್ತಿಯ ಮಹತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಸಮಗ್ರವಾಗಿ ತಿಳಿಸಿಕೊಟ್ಟರು.
ಸಂಘಟನೆ ಪದಾಧಿಕಾರಿಗಳಾದ ಜಗದೀಶ ಮನಗೂಳಿ, ರವಿ ಸಿಂಹಾಸನ, ಜಗದೀಶ ಬಿರಾದಾರ, ಶ್ರೀಶೈಲ ಮೇತ್ರಿ, ರಂಜಿತ, ಪ್ರೊ.ಎಸ್.ಎಂ. ಕುಂಬಾರ, ಡಾ.ಮಹಾನಂದ, ಪ್ರೊ.ಸಂಗೀತಾ ನಾಯಕ, ಪ್ರೊ.ಬಿ.ಎಲ್. ಚವ್ಹಾಣ ಉಪಸ್ಥಿತರಿದ್ದರು. ಪೂಜಾ ಚವ್ಹಾಣ ಪ್ರಾರ್ಥಿಸಿದರು. ಕಾವೇರಿ ಬೆಳ್ಳುಂಡಗಿ ಸ್ವಾಗತಿಸಿದರು. ಶಂಕರ ಹುಣಸಗಿ ನಿರೂಪಿಸಿದರು.