ಕನ್ನಡಪ್ರಭ ವಾರ್ತೆ ಗೋಕಾಕ

ಜಿಲ್ಲೆಯಲ್ಲಿನ ಮಳೆಯ ಕೊರತೆ ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾನುವಾರ ಬೆಳಗ್ಗೆ ಘಟಪ್ರಭಾ ಸಮೀಪದ ಧುಪದಾಳ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟ, ಒಳಹರಿವು ಹಾಗೂ ನೀರು ನಿರ್ವಹಣೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.ಪರಿಶೀಲನೆ ಬಳಿಕ ಮಾತನಾಡಿದ ಅವರು, ಮುಂಗಾರು ವಿಳಂಬದಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕ ಈಗ ದೂರವಾಗತೊಡಗಿದೆ. ಕಳೆದ ಕೆಲವು ದಿನಗಳಿಂದ ಮುಂಗಾರು ಚುರುಕುಗೊಂಡಿರುವ ಪರಿಣಾಮ ಹಿರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳಿಗೆ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮ ಧುಪದಾಳ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸ್ತುತ ಸುಮಾರು 8 ಸಾವಿರ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ ಎಂದು ತಿಳಿಸಿದರು.ಜಲಾಶಯಕ್ಕೆ ಹರಿದು ಬರುತ್ತಿರುವ ಹೆಚ್ಚುವರಿ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಬೆಳಗಾವಿಯಿಂದ ಬಾಗಲಕೋಟೆವರೆಗೆ ನದಿಯ ಹರಿವು ಸುಧಾರಿಸಿದೆ. ಈಗಾಗಲೇ ಬಾಗಲಕೋಟೆ ಜಿಲ್ಲೆಗೆ ನೀರು ಹರಿಸಲಾಗಿದ್ದು, ಬಿಡುಗಡೆಯಾದ ನೀರು ತಲುಪಿದೆ ಎಂದು ಸಚಿವರು ಹೇಳಿದರು.ರೈತರ ಹಿತದೃಷ್ಟಿಯಿಂದ ಭಾನುವಾರ ಬೆಳಿಗ್ಗೆಯಿಂದಲೇ ಘಟಪ್ರಭಾ ಎಡದಂಡೆ ಕಾಲುವೆಗೆ 1,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸಂಜೆ ವೇಳೆಗೆ ನೀರಿನ ಹರಿವನ್ನು 2,000 ಕ್ಯೂಸೆಕ್‌ಗೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಸುಮಾರು 2 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆತು, ರೈತರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ರೈತರು ಲಭ್ಯವಿರುವ ನೀರನ್ನು ಮಿತವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಂಡು ನೀರಿನ ಸದ್ಬಳಕೆಗೆ ಆದ್ಯತೆ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಲಾಶಯದ ನೀರಿನ ಮಟ್ಟ ಹಾಗೂ ಒಳಹರಿವಿನ ಮೇಲೆ ನಿರಂತರ ನಿಗಾ ವಹಿಸಿ, ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದುಂಡಪ್ಪ ಜೋಕನಟ್ಟಿ, ನೀರಾವರಿ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ರಾಜು ವಗ್ಗಣ್ಣವರ, ಶಿವು ಪಾಟೀಲ, ಮಹೇಶ ಚಿಕ್ಕೋಡಿ, ಬಸು ನಾಡಗೇರ ಸೇರಿದಂತೆ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.