ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಲ್ಲದೆ ಬೇರಾರಿಂದಲೂ ಕಟ್ಟಿಕೊಡಲು ಸಾಧ್ಯವಿಲ್ಲ. ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಹೂಗಳೆಷ್ಟೋ ಹೇಳಲಾಗದು. ಜೀವನದ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮನುಷ್ಯ ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕಲ್ಲದೆ ಬೇರಾರಿಂದಲೂ ಕಟ್ಟಿಕೊಡಲು ಸಾಧ್ಯವಿಲ್ಲ. ಜೀವನದ ಹೂದೋಟದಲ್ಲಿ ಅರಳುವ ಹೂಗಳೆಷ್ಟೋ ಬಾಡುವ ಹೂಗಳೆಷ್ಟೋ ಹೇಳಲಾಗದು. ಜೀವನದ ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅವಶ್ಯಕವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಯಾಳವಾರ ಗ್ರಾಮದಲ್ಲಿ ಭಾನುವಾರ ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘದ ಸುವರ್ಣ ಮಹೋತ್ಸವ ನಿಮಿತ್ತ ಜರುಗಿದ ನೂತನ ಪ್ರೌಢಶಾಲಾ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿಯ ಫಲ ಸಿಗುತ್ತದೆ ಎಂದ ಅವರು, ಐವತ್ತು ವರ್ಷ ತುಂಬಿದ ಸುಸಂದರ್ಭದಲ್ಲಿ ನೂತನ ಪ್ರೌಢಶಾಲೆ ಕಟ್ಟಡ ಮತ್ತು ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆಗೊಂಡಿರುವುದು ಸಂತೋಷದ ಸಂಗತಿ, ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಜೊತೆ ಆಡಳಿತ ಮಂಡಳಿಯವರ ಶ್ರಮದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿದೆ. ಶಿಕ್ಷಕರು ನಮ್ಮ ಶಾಲೆ ಎಂಬ ಅಭಿಮಾನದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿಕೊಡುವ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಶತಮಾನೋತ್ಸವ ಆಚರಿಸಲಿ ಹಾಗೂ ಸುವರ್ಣ ಮಹೋತ್ಸವದ ಜೊತೆ ಗುರುವಂದನಾ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಮತ್ತು ಪಿಕೆಪಿಎಸ್ ಅಧ್ಯಕ್ಷರೂ ಆದ ರಾಜುಗೌಡ ನಾಡಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಗುರಿಯಿಲ್ಲದ ಗುರಿ ಸಾಧಿಸದ ಜೀವನ ವ್ಯರ್ಥ. ಜೀವನದ ಉನ್ನತಿ ಉತ್ಕರ್ಷತೆಗಾಗಿ ಶಿಕ್ಷಣ ಎಲ್ಲರಿಗೂ ಅವಶ್ಯಕ. ಯಾಳವಾರ ಗ್ರಾಮದ ಜನತೆ ಉತ್ತಮ ವಿದ್ಯಾ ಸಂಸ್ಥೆ ಕಟ್ಟಿ ಗ್ರಾಮೀಣ ವಿದ್ಯಾರ್ಥಿಗಳ ಬಾಳ ಬದುಕಿಗೆ ಬೆಳಕು ತೋರಿದ್ದಾರೆ ಎಂದರು.

ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ ಅವರು ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮತನಾಡಿ, ಆಧುನಿಕ ಕಾಲದಲ್ಲಿ ಎಲ್ಲರೂ ವಿದ್ಯಾವಂತರಾಗುತ್ತಿರುವುದು ಸಂತೋಷದ ಸಂಗತಿ. ವಿದ್ಯೆಯ ಜೊತೆಗೆ ವಿನಯ ಮತ್ತು ಸಂಸ್ಕಾರವಂತರಾಗಿ ಬಾಳಿದರೆ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ವಿದ್ಯಾ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ ಯಾಳವಾರ ಗ್ರಾಮದ ಜನರ ಶಿಕ್ಷಣ ಪ್ರೇಮ ಇಷ್ಟೆಲ್ಲ ಅಭ್ಯುದಯಕ್ಕೆ ಕಾರಣವಾಗಿದೆ. ಯಾಳವಾರ ಗ್ರಾಮದ ಹಿರಿಯರು ಶ್ರೀ ಸೋಮೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸಿ ತನ್ಮೂಲಕ ಪ್ರೌಢಶಾಲೆ ಮತ್ತು ವಿದ್ಯಾರ್ಥಿನಿಲಯ ಮುನ್ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಯಾಳವಾರ ಗುರುಮಠದ ದಾರುಕಲಿಂಗ ಶಿವಾಚಾರ್ಯರು ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಮಾರಂಭದ ನೇತೃತ್ವ ವಹಿಸಿದ್ದರು. ಕಡಕೋಳ ರಾಜಗುರು ಮಹಾಲಿಂಗಸ್ವಾಮಿಗಳು, ದೇವರಹಿಪ್ಪರಗಿ ಶಿವಯೋಗಿಸ್ವಾಮಿಗಳು ಉಪಸ್ಥಿತರಿದ್ದರು.

ಮಾಜಿ ಶಾಸಕರಾದ ಎಸ್.ಬಿ. ಸುಣಗಾರ, ಸೋಮನಗೌಡ ಪಾಟೀಲ, ಅರುಣ ಶಹಾಪುರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ.ಪ್ರಭುಗೌಡ ಲಿಂಗದಳ್ಳಿ, ಸಂಜುಗೌಡ ಪಾಟೀಲ, ಆನಂದಗೌಡ ದೊಡಮನಿ, ಭೀಮನಗೌಡ ಪಾಟೀಲ, ಬಸನಗೌಡ ಪಾಟೀಲ, ಮಂಜುನಾಥ ಗುಳೇದಗುಡ್ಡ, ವಸಂತ ರಾಠೋಡ, ಡಾ.ವ್ಹಿ.ಡಿ. ಐಹೊಳೆ ಭಾಗವಹಿಸಿದ್ದರು.

ಸಾಹಿತಿ ಹಾಗೂ ಶಿಕ್ಷಕರಾದ ಅಶೋಕ ಹಂಚಲಿ ಮತ್ತು ಡಾ.ಮಂಜುಳಾ ಪಾಟೀಲ ಶಿಕ್ಷಣ ಮಹತ್ವ ಕುರಿತು ಉಪನ್ಯಾಸನ್ನಿತ್ತರು. ಬಿ.ವೈ. ಚಿಂಚಸೂರು, ಜಿ.ಆರ್.ಕುಂಬಾರ ಸುನಂದಾ ಜಾಲವಾದಿ ನಿರೂಪಿಸಿದರು.

ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ಹೊರತು ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆಯ ಗುಣ ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಅಶಾಂತಿ ಮತ್ತು ಅತೃಪ್ತಿಗೆ ಕಾರಣವೆಂದರೆ ತಪ್ಪಾಗದು. ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲೆ ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ ಹಣ ಸಂಪಾದನೆ ಗುರಿಯಾಗಿಟ್ಟುಕೊಂಡ ಮನುಷ್ಯ ಬದುಕಲು ಬೇಕಾದ ಜ್ಞಾನ ಪಡೆಯುತ್ತಿಲ್ಲ. ಶಿಕ್ಷಣದಿಂದ ಬುದ್ಧಿಶಕ್ತಿ ಬೆಳೆದರೆ ಧರ್ಮದಿಂದ ಭಾವನೆಗಳು ಬೆಳೆಯುತ್ತವೆ. ಬೆಳೆಯುವ ಮನುಷ್ಯನಿಗೆ ಇವೆರಡರ ಅವಶ್ಯಕತೆಯಿದೆ.

- ಡಾ. ವೀರಸೋಮೇಶ್ವರ ಶಿವಾಚಾರ್ಯರು ಜಗದ್ಗುರುಗಳು ರಂಭಾಪುರಿ ಪೀಠ ಬಾಳೆಹೊನ್ನೂರು