ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರನ್ನು ಮೂಲವಾಗಿಟ್ಟುಕೊಂಡು ಯಡಿಯೂರಪ್ಪ ಆಡಳಿತ ನಡೆಸಿದ್ದಾರೆ. ಬಿಜೆಪಿ ಅವಧಿಯಲ್ಲಿನ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ. ಎರಡು ವರ್ಷದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ
ನೀಡುತ್ತಿದ್ದ ರೈತ ವಿದ್ಯಾನಿಧಿ ಸ್ಥಗಿತಗೊಳಿಸಿದೆ. 52 ಲಕ್ಷ ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ₹4000 ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದೆ. ರೈತರ ಕೃಷಿ ಪಂಪ್‌ಸೆಟ್‌ಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಬಿಜೆಪಿ ಸರ್ಕಾರದಲ್ಲಿ ₹25000 ನಿಗದಿಪಡಿಸಿತ್ತು. ಆದರೆ ಇಂದಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಪಂಪ್‌ಸೆಟ್‌ಗೆ ಟ್ರಾನ್ಸ್‌ಫಾರ್ಮರ್ ಅಳವಡಿಸಲು ₹3 ಲಕ್ಷ ನೀಡಬೇಕಾಗಿದೆ ಎಂದು ದೂರಿದರು.ಕರ್ನಾಟಕದಲ್ಲಿ ಬಿತ್ತನೆ ಬೀಜದ ಮೇಲಿನ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ಶೇ.20 ರಷ್ಟು ಏರಿಕೆ ಮಾಡಲಾಗಿದೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ ₹3454 ಕೋಟಿ ಅನುದಾನದಲ್ಲಿ ನಯಾಪೈಸೆಯನ್ನು ರಾಜ್ಯದ ರೈತರಿಗೆ ತಲುಪಿಸದೆ ಲೂಟಿ ಹೊಡೆದಿದ್ದಾರೆ. ಕರ್ನಾಟಕಕ್ಕೆ 6.30 ಲಕ್ಷ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರದ ಅವಶ್ಯಕತೆ ಇದ್ದು, ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಿಗೆ ಕರ್ನಾಟಕಕ್ಕೆ ನೀಡಿದೆ ಎಂದ ಅವರು, ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೆ ಕಾಳಸಂತೆಯಲ್ಲಿ ಕಾಂಗ್ರೆಸ್ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.ಕಳೆದ 2 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 3400ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭೂ ಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹10000 ನೀಡುವ ಪ್ರೋತ್ಸಾಹಧನವನ್ನು ಕೂಡ ನಿಲ್ಲಿಸಿದ್ದಾರೆ. ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿದರು.ಹಾವೇರಿ ಮತ್ತು ರಾಣೆಬೆನ್ನೂರಿನಲ್ಲಿ ರಸಗೊಬ್ಬರ ಖರೀದಿಸಲು ಮುಂದಾಗಿದ್ದ ರೈತರಿಗೆ ಪೊಲೀಸರು ಲಾಟಿ ಚಾರ್ಜ್ ಮಾಡಿರುವುದನ್ನು ಬಿಜೆಪಿಯು ತೀವ್ರವಾಗಿ ಖಂಡಿಸುತ್ತದೆ. ಕರ್ನಾಟಕದಲ್ಲಿ ರಸಗೊಬ್ಬರದ ಅವೈಜ್ಞಾನಿಕವಾಗಿ ಶೇಖರಣೆ ಮಾಡಿರುವ ಪರಿಣಾಮವಾಗಿ ಕರ್ನಾಟಕ ಎಲ್ಲ ಜಿಲ್ಲಾದ್ಯಂತ ರಸಗೊಬ್ಬರದ ಅಭಾವ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕೊಪ್ಪಳದಲ್ಲಿ ರೈತನೊಬ್ಬ ಗೊಬ್ಬರ ಸಿಗುತ್ತಿಲ್ಲ ಎಂದು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಶಾಪ ಸರ್ಕಾರಕ್ಕೆ ತಟ್ಟದೇ ಇರದು. ರಾಜ್ಯ ಸರ್ಕಾರದ ಕೃಷಿ ಸಚಿವರು ಮತ್ತು ಇಲಾಖೆ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದರು.ಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡ್ರ, ವಿಶ್ವನಾಥ ಪಾಟೀಲ, ಎಂ.ಬಿ.ಜಿರಲಿ, ಜಗದೀಶ ಬೂದಿಹಾಳ ಮತ್ತಿತರರು ಉಪಸ್ಥಿತರಿದ್ದರು.