ರಾಮನಗರ: ಒಂದು ಕಾಲದಲ್ಲಿ ಕೃಷಿ ಎಂದರೆ ಕೇವಲ ಆಹಾರ ಉತ್ಪಾದನೆ ಎಂಬ ಕಲ್ಪನೆ ಇತ್ತು. ಆದರೆ ಇಂದಿನ ಕೃಷಿ ಕೇವಲ ಆಹಾರಕ್ಕೆ ಸೀಮಿತವಾಗಿಲ್ಲ. ಕೃಷಿಯಿಂದ ಇಂಧನ, ರಾಸಾಯನಿಕ ಉತ್ಪನ್ನಗಳು, ಬಟ್ಟೆಗಳು, ಔಷಧಿಗಳು ಹಾಗೂ ಅನೇಕ ಕೈಗಾರಿಕಾ ಉತ್ಪನ್ನಗಳು ತಯಾರಾಗುತ್ತಿವೆ. ರೈತರು ಕೃಷಿ ಮೂಲಕವೇ ದೇಶವನ್ನು ಮುನ್ನೆಡೆಸುವ ಅವಕಾಶವಿದೆ ಎಂದು ಬಿಜೆಪಿ ರೈತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಹೇಳಿದರು.
ಇಂದು ಭಾರತವು ಕೇವಲ ಆಹಾರ ಉತ್ಪಾದನೆಯಲ್ಲಿ ಮಾತ್ರವಲ್ಲ, ಇಂಧನ ಉತ್ಪಾದನೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ ಎಥನಾಲ್ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ. ಎಥನಾಲ್ ಅನ್ನು ಕಬ್ಬು, ಧಾನ್ಯಗಳು ಹಾಗೂ ಇತರೆ ಕೃಷಿ ಉತ್ಪನ್ನಗಳಿಂದ ತಯಾರಿಸಬಹುದು. ಭವಿಷ್ಯದಲ್ಲಿ ಕೃಷಿಕರು ಮತ್ತು ರೈತರು ದೇಶದ ಆರ್ಥಿಕ ನಾಯಕತ್ವವನ್ನು ವಹಿಸುವ ಶಕ್ತಿಯನ್ನು ಪಡೆಯಲಿದ್ದಾರೆ. ನಾವು ರೈತರು ದೇಶವನ್ನಷ್ಟೇ ಅಲ್ಲ, ಜಗತ್ತನ್ನೂ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದೇವೆ. ಕೃಷಿ ಕ್ಷೇತ್ರದ ಮಹತ್ವ ಇದೇ ಆಗಿದೆ ಎಂದು ತಿಳಿಸಿದರು.
ಜಗತ್ತಿನಾದ್ಯಂತ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ. ಗಲ್ಫ್ ಯುದ್ಧದ ನಡುವೆಯೂ ಅಮೆರಿಕಾ, ಚೀನಾ, ಜಪಾನ್ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ಭಾರತ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತಂತ್ರಜ್ಞಾನ, ಕೃಷಿ ಆಧಾರಿತ ಉದ್ಯಮ, ರಕ್ಷಣಾ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ಇಂದು ಜಾಗತಿಕ ನಾಯಕತ್ವದ ಸ್ಥಾನದಲ್ಲಿದೆ.ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಭಾರತ ವಿಶ್ವದ ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಅಕ್ಕಿ, ಗೋಧಿ, ತರಕಾರಿಗಳು, ಹಾಲು, ಮೊಟ್ಟೆ, ಧಾನ್ಯಗಳು, ಸಿರಿಧಾನ್ಯಗಳು ಸೇರಿದಂತೆ ಅನೇಕ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.
ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್, ಜಿಲ್ಲಾಧ್ಯಕ್ಷ ಜಗನ್ನಾಥ್, ಬಿಜೆಪಿ ಮುಖಂಡರಾದ ದೇವರಾಜ್, ಎಸ್.ಅರ್.ನಾಗರಾಜ್, ವರದರಾಜಗೌಡ ಮತ್ತಿತರರು ಉಪಸ್ಥಿತರಿದ್ದರು.
5.ರಾಮನಗರದಲ್ಲಿ ಬಿಜೆಪಿ ರೈತ ಮೋರ್ಚಾದ ಕಚೇರಿಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಜಯಸೂರ್ಯನ್ ಉದ್ಘಾಟಿಸಿದರು.