ಕಾವೇರಿ ನದಿಯಿಂದ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿ ರೈತರು ಬೈಕ್ ರ್ಯಾಲಿ

KannadaprabhaNewsNetwork |  
Published : Aug 06, 2025, 01:15 AM IST
ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿ ರೈತರು ಬೈಕ್ ರ್ಯಾಲಿ | Kannada Prabha

ಸಾರಾಂಶ

ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಹನೂರು ತಾಲೂಕು ದಂಡಾಧಿಕಾರಿ ಚೈತ್ರಾ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೀಡಿರುವ ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನ ಶೆಟ್ಟಳ್ಳಿ, ಮಾರ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿ ಮೂಲದಿಂದ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿ, ರೈತರು ಬೈಕ್ ರ್‍ಯಾಲಿ ಮುಖಾಂತರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತ ರೈತರು, ನಾಲ್ ರೋಡ್ ಗ್ರಾಮದಿಂದ ಬೈಕ್ ರ್‍ಯಾಲಿ ಹೊರಟು ಮಾರ್ಟಳ್ಳಿ, ವಡಕೆ ಹಳ್ಳ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ, ಹೊಸೂರು, ದಂಟಳ್ಳಿ ಮಾರ್ಗವಾಗಿ ಕಾವೇರಿ ನದಿಗೆ ತೆರಳಿ ನದಿಯಲ್ಲಿ ಇಳಿದು ಪ್ರತಿಭಟನೆ ನಡೆಸಲು ತಯಾರಿ ಮಾಡಿಕೊಂಡಿದ್ದರು. ಆದರೆ ಪೊಲೀಸರು ರೈತರನ್ನು ಮಾರ್ಗ ಮಧ್ಯದಲ್ಲಿಯೇ ತಡೆದರು.

ಈ ವೇಳೆ ರೈತ ಮುಖಂಡರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಕಾವೇರಿ ನದಿಯ ನೀರನ್ನು ಬಳಕೆ ಮಾಡದೆ ತಮಿಳುನಾಡಿಗೆ ಹರಿಬಿಟ್ಟಿರುವ ಧೋರಣೆಯನ್ನು ಖಂಡಿಸಿ ಹಾಗೂ ನಮ್ಮ ಭಾಗದ ರೈತರಿಗೆ ನೀರು ಕೊಡದ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕಾವೇರಿ ನದಿ ಹತ್ತಿರದಲ್ಲಿಯೇ ಹರಿಯುತ್ತಿದ್ದರೂ ಹನೂರು ತಾಲೂಕಿನ ಹಲವು ಗ್ರಾಮಗಳ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದ ಕೆರೆ ಹಾಗೂ ಜಲಾಶಯಗಳಿಗೆ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡುವಂತೆ ರೈತರು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಮುಂದಾದರೆ ಪ್ರತಿಭಟನೆಗೂ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ತಹಸೀಲ್ದಾರ್ ಭೇಟಿ:ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಹನೂರು ತಾಲೂಕು ದಂಡಾಧಿಕಾರಿ ಚೈತ್ರಾ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವೀಕರಿಸಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೀಡಿರುವ ಬೇಡಿಕೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಇದೇ ವೇಳೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಗುರುಸ್ವಾಮಿ, ರಾಜಸ್ವ ನಿರೀಕ್ಷಕ ಶಿವಕುಮಾರ್ ಹಾಗೂ ಗ್ರಾಮಲೆಕ್ಕಿಗ ಸುರೇಶ ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮ
ಹಾಲುಮತ ಸಮಾಜದವರ ಕನಸು ನನಸಾಗುತ್ತಿದೆ