ವರುಣನ ಆರ್ಭಟಕ್ಕೆ ಅನ್ನದಾತ ಕಂಗಾಲು, 150 ಎಕರೆ ಭತ್ತ, 95 ಎಕರೆ ಬಾಳೆ ಬೆಳೆ ನಷ್ಟ

KannadaprabhaNewsNetwork |  
Published : Apr 19, 2026, 02:45 AM IST
ಕಂಪ್ಲಿಯಲ್ಲಿ ವರುಣನ ಆರ್ಭಟಕ್ಕೆ ನೆಲಕ್ಕೊರಗಿದ ಭತ್ತ.ಫೋಟೋ 2. ಕಂಪ್ಲಿಯಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಳಗಾಗಿರುವ ಬಾಳೆ ಬೆಳೆ. | Kannada Prabha

ಸಾರಾಂಶ

ತಾಲೂಕಿನಾದ್ಯಂತ ವರುಣನ ಆರ್ಭಟಕ್ಕೆ ಅನ್ನದಾತರು ಅಕ್ಷರಶಃ ನಲುಗಿ ಹೋಗಿದ್ದಾರೆ.

ಬಿ.ಎಚ್.ಎಂ. ಗುರುಶಾಂತಶಾಸ್ತ್ರಿ

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ವರುಣನ ಆರ್ಭಟಕ್ಕೆ ಅನ್ನದಾತರು ಅಕ್ಷರಶಃ ನಲುಗಿ ಹೋಗಿದ್ದಾರೆ. ಗುರುವಾರ ಸುರಿದ ಅಕಾಲಿಕ ಮಳೆಗೆ ಇನ್ನೇನು ವಾರದೊಳಗೆ ಕೊಯ್ಲಿಗೆ ಸಿದ್ಧವಾಗಿದ್ದ ಭತ್ತದ ಬೆಳೆ ಭಾರೀ ಮಳೆಯ ಪರಿಣಾಮ ನೆಲಕ್ಕೆ ಒರಗಿ ಹಾನಿಗೀಡಾಗಿದೆ.ಸಣಾಪುರ, ಅರಳಿಹಳ್ಳಿ, ಮಾರೆಮ್ಮಕ್ಯಾಂಪ್, ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೇರಿ ಒಟ್ಟಾರೆ ತಾಲೂಕಿನಲ್ಲಿ ಸುಮಾರು 150 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಕೊಯ್ಲು ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೆಲಕ್ಕೆ ಬಿದ್ದ ಬೆಳೆ ಸೂಡು ಕಟ್ಟಲು ಸಾಧ್ಯವಾಗದ ಮಟ್ಟಿಗೆ ಹಾನಿಯಾಗಿರುವುದು ರೈತರ ಆತಂಕ ಹೆಚ್ಚಿಸಿದೆ.

ಡಿಸೆಂಬರ್ ತಿಂಗಳಲ್ಲಿ ನಾಟಿ ಮಾಡಿದ್ದ ಈ ಭತ್ತ ಬೆಳೆಯಲು ಆರಂಭದಿಂದಲೇ ರೈತರಿಗೆ ಹಲವು ಸವಾಲುಗಳು ಎದುರಾಗಿದ್ದವು. ವಾತಾವರಣದ ಬದಲಾವಣೆಗಳಿಂದ ಹುಳುಕಾಟ ಹೆಚ್ಚಾಗಿ, ರೈತರು ಹಲವು ಬಾರಿ ಔಷಧಿ ಸಿಂಪಡಣೆ ಮಾಡಬೇಕಾಯಿತು. ಕೆಲವು ಸಂದರ್ಭಗಳಲ್ಲಿ ಔಷಧಿಯ ಪರಿಣಾಮದಿಂದ ಸಸಿಗಳೇ ಕರಗಿದ ಘಟನೆಗಳೂ ನಡೆದಿವೆ.

ಆದರೂ ಬೆಳೆ ಉಳಿಸಿಕೊಳ್ಳಲು ರೈತರು ಹತೋಟಿ ಕಳೆದುಕೊಳ್ಳದೇ ನಿರಂತರವಾಗಿ ರಸಗೊಬ್ಬರ, ಸಾವಯವ ಗೊಬ್ಬರ ನೀಡುವ ಜೊತೆಗೆ ಎಂಟರಿಂದ ಹೆಚ್ಚು ಬಾರಿ ಔಷಧಿ ಸಿಂಪಡಣೆ ನಡೆಸಿದ್ದಾರೆ. ಎಕರೆಗೆ ಸುಮಾರು 45ರಿಂದ 50 ಸಾವಿರ ರುಪಾಯಿವರೆಗೆ ಖರ್ಚು ಮಾಡಿ ಬೆಳೆ ಕೊಯ್ಲಿನ ಹಂತಕ್ಕೆ ತಲುಪಿಸಿದ್ದರು. ಆದರೆ ಅಕಾಲಿಕ ಮಳೆ ಎಲ್ಲ ಪರಿಶ್ರಮ ಹಾಳು ಮಾಡಿದೆ.

ಇದೀಗ ರೈತರ ಆರ್ಥಿಕ ಸ್ಥಿತಿ ಸಂಕಷ್ಟಕರವಾಗಿದೆ. ತಕ್ಷಣವೇ ಸರ್ಕಾರ ನೆರವಿಗೆ ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡದೇ ಗದ್ದೆಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ನಡೆಸಿರುವುದಕ್ಕೂ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತ ರೈತರಾದ ಕೊನೇರು ಶ್ರೀರಾಮಕೃಷ್ಣ, ಮನ್ನೆ ಪ್ರಸಾದ್, ವೇಮೂರಿ ವಾಸು, ಕೊನೇರು ನಾಗೇಶ್ವರರಾವು, ಪುಲ್ಲಂ ರಾಜು ಸೇರಿದಂತೆ ಅನೇಕರು ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

95 ಎಕರೆ ಬಾಳೆ ನಷ್ಟ:

ತಾಲೂಕಿನ ನಂ.2 ಮುದ್ದಾಪುರ, ಶಂಕರಸಿಂಗ್ ಕ್ಯಾಂಪ್, ಬೊಜ್ಜಯ್ಯ ಕ್ಯಾಂಪ್, ಕೊಂಡಯ್ಯ ಕ್ಯಾಂಪ್, ರಾಮಸಾಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಾಳೆ ತೋಟಗಳು ನೆಲಕ್ಕುರುಳಿವೆ. ವಿಶೇಷವಾಗಿ ಜಿ-9 (ಗ್ರ್ಯಾಂಡ್ ನೈನ್) ಹಾಗೂ ಯಾಲಕ್ಕಿ ತಳಿಯ ಬಾಳೆ ಗಿಡಗಳು ಗಾಳಿ-ಮಳೆಯ ತೀವ್ರತೆಗೆ ತಾಳದೇ ನೆಲಕ್ಕೆ ಉರುಳಿವೆ. ಕೆಲವು ಪ್ರದೇಶಗಳಲ್ಲಿ ಗಾಳಿ ವೇಗ ಹೆಚ್ಚಿದ್ದರಿಂದ ಗಿಡಗಳು ಬೇರು ಸಮೇತ ಕಿತ್ತು ಬಿದ್ದಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಕೊಯ್ಲಿಗೆ ಸಿದ್ಧವಾಗಿದ್ದ ಅಥವಾ ಕೊಯ್ಲಿನ ಹಂತದಲ್ಲಿದ್ದ ತೋಟಗಳು ಹೆಚ್ಚಿನ ಹಾನಿಗೊಳಗಾಗಿರುವುದು ಗಮನಾರ್ಹವಾಗಿದೆ.

ತಾಲೂಕಿನಲ್ಲಿ ಸುಮಾರು 95 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಾಳೆ ಬೆಳೆ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದೆ. ಕೆಲವು ರೈತರ ತೋಟಗಳಲ್ಲಿ ಬಹುತೇಕ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಳೆ ಬೆಳೆಗೆ ಮಾಡಿದ ಹೂಡಿಕೆ, ಗೊಬ್ಬರ, ನೀರಾವರಿ, ಕೂಲಿ ಕಾರ್ಮಿಕರ ವೆಚ್ಚ ಸೇರಿದಂತೆ ಎಲ್ಲಾ ಖರ್ಚುಗಳನ್ನು ಪರಿಗಣಿಸಿದರೆ ಲಕ್ಷಾಂತರ ರೂಪಾಯಿಯಷ್ಟು ನಷ್ಟ ಅನುಭವಿಸಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಕಾಲಿಕ ಮಳೆಯ ಅಬ್ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಭಾಗದ ರೈತರಿಗೆ ಸರ್ಕಾರದ ತುರ್ತು ಸ್ಪಂದನೆ ಎಷ್ಟು ಬೇಗ ದೊರೆಯುತ್ತದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಮಳೆಗೆ ಹಾನಿಗೊಳಗಾದ ರೈತರ ಜಮೀನುಗಳಿಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭತ್ತ, ಬಾಳೆ ಬೆಳೆಗಳ ಹಾನಿಯ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ಮೂಲಕ ರೈತರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎನ್ನುತ್ತಾರೆ ತಹಸೀಲ್ದಾರ್ ಜೂಗಲ ಮಂಜುನಾಯಕ.

ಅಕಾಲಿಕ ಮಳೆಯಿಂದಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಷ್ಟ ಪರಿಹಾರದ ಕೊಡಿಸುವುದಾಗಿ ಅಧಿಕಾರಿಗಳು ಸಬೂಬು ಉತ್ತರ ನೀಡದೇ ಕೂಡಲೇ ರೈತರಿಗೆ ಸಂಪೂರ್ಣ ನಷ್ಟ ಪರಿಹಾರ ಒದಗಿಸುವ ಮೂಲಕ ನೆರವಿಗೆ ಮುಂದಾಗಬೇಕು ಎನ್ನುತ್ತಾರೆ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಬಿಷಪ್‌ ಪೀಠಾರೋಹಣ: ದೇಶದ 35 ಬಿಷಪರು, 250 ಧರ್ಮಗುರುಗಳು ಭಾಗಿ
ಕೊಡವೂರು ದೇವಳ: ಮೇ 14ರಿಂದ ಮಹಾ ರುದ್ರಯಾಗ