ಮುಂಗಾರಿ ಬಿತ್ತನೆ ಬೀಜಕ್ಕಾಗಿ ಹಾವೇರಿಯಲ್ಲಿ ರೈತರ ಪರದಾಟ

KannadaprabhaNewsNetwork |  
Published : May 23, 2026, 02:00 AM IST
ಹಾವೇರಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಪಡೆಯಲು ರೈತರ ನೂಕುನುಗ್ಗಲು ಉಂಟಾಗಿರುವ ದೃಶ್ಯ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ ಈ ಸಲವೂ ಮುಂದುವರಿದಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಸೋಯಾಬಿನ್‌ ಬಿತ್ತನೆ ಬೀಜ ಪಡೆಯಲು ಮುಗಿಬಿದ್ದಿದ್ದಾರೆ. ಪೊಲೀಸ್ ಬಿಗು ಬಂದೋಬಸ್ತ್‌ನಲ್ಲಿ ಬೀಜ ವಿತರಣೆ ನಡೆದಿದ್ದು, ಸಮರ್ಪಕವಾಗಿ ಬೀಜ ವಿತರಿಸದ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ ಹೆಚ್ಚುತ್ತಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ ಈ ಸಲವೂ ಮುಂದುವರಿದಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುತ್ತಿರುವ ಸೋಯಾಬಿನ್‌ ಬಿತ್ತನೆ ಬೀಜ ಪಡೆಯಲು ಮುಗಿಬಿದ್ದಿದ್ದಾರೆ. ಪೊಲೀಸ್ ಬಿಗು ಬಂದೋಬಸ್ತ್‌ನಲ್ಲಿ ಬೀಜ ವಿತರಣೆ ನಡೆದಿದ್ದು, ಸಮರ್ಪಕವಾಗಿ ಬೀಜ ವಿತರಿಸದ ಕೃಷಿ ಇಲಾಖೆ ವಿರುದ್ಧ ರೈತರ ಆಕ್ರೋಶ ಹೆಚ್ಚುತ್ತಿದೆ.

ಮುಂಗಾರು ಹಂಗಾಮು ಆರಂಭವಾದರೆ ಹಾವೇರಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕಾಗಿ ರೈತರ ಪರದಾಟ ಕಾಯಂ ಎಂಬಂತಾಗಿದೆ. ಈ ಸಲವೂ ಅದೇ ಗೊಂದಲ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಮುಂಗಾರು ಆರಂಭದಲ್ಲಿ ಜಿಲ್ಲೆಯಲ್ಲಿ ಸೋಯಾಬಿನ್‌ ಬಿತ್ತನೆ ಹೆಚ್ಚಾಗಿ ನಡೆಯುತ್ತದೆ. ಈ ಸಲ ತುಸು ಮುಂಚಿತವಾಗಿಯೇ ಮಳೆಯಾಗಿರುವುದರಿಂದ ಬಿತ್ತನೆ ಬೀಜಕ್ಕೂ ಬೇಡಿಕೆ ಹೆಚ್ಚಿದೆ. ಗುರುವಾರದಿಂದ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಸೇರಿದಂತೆ ಒಟ್ಟು 42 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ, ನೂರಾರು ಸಂಖ್ಯೆಯ ರೈತರು ಒಮ್ಮೆಲೇ ಆಗಮಿಸಿರುವುದರಿಂದ ಗೊಂದಲ ನಿರ್ಮಾಣವಾಗಿ ನೂಕುನುಗ್ಗಲಿನ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಬೀಜ ಪಡೆಯಲು ಆರ್‌ಎಸ್‌ಕೆ ಎದುರು ರೈತರು ಹಗಲು ರಾತ್ರಿ ಪಾಳಿ ಹಚ್ಚಿ ಕಾಯುತ್ತಿದ್ದಾರೆ. ದಿನವಿಡಿ ಕಾದರೂ ಪಾಳಿ ಸಿಗದೇ ರೈತರ ಸಹನೆಯ ಕಟ್ಟೆ ಒಡೆಯುತ್ತಿದೆ. ಎರಡು ದಿನಗಳಿಂದ ಬೀಜ ಸಿಗದ ರೈತರು ಕೃಷಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಹೆಚ್ಚಿದ ಸೋಯಾ ಡಿಮ್ಯಾಂಡ್‌: ಕಳೆದ ವರ್ಷ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆ ಹಾವಳಿ ಹಾಗೂ ಬೆಲೆ ಕುಸಿತದಿಂದ ಸಂಕಷ್ಟ ಎದುರಿಸಿರುವ ರೈತರು ಈ ಸಲ ಸೋಯಾಬಿನ್‌ ಕಡೆ ಮುಖ ಮಾಡಿದ್ದಾರೆ. ಇದರಿಂದ ಸೋಯಾಬಿನ್‌ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಜಿಲ್ಲೆಗೆ 8960 ಕ್ವಿಂಟಲ್‌ ಸೋಯಾಬೀನ್‌ ಬೀಜ ಹಂಚಿಕೆಯಾಗಿದ್ದು, ಆ ಪೈಕಿ 7725 ಕ್ವಿಂಟಲ್‌ ಪೂರೈಕೆಯಾಗಿದೆ. ವಿತರಣೆ ಆರಂಭಿಸಿದ ಮೊದಲ ದಿನವೇ 4155 ಕ್ವಿಂಟಲ್‌ ಖಾಲಿಯಾಗಿದೆ. ಇನ್ನು 3750 ಕ್ವಿಂಟಲ್‌ ಸೋಯಾಬಿನ್‌ ಬಿತ್ತನೆಬೀಜ ದಾಸ್ತಾನಿದೆ. ಇನ್ನುಳಿದಂತೆ ಮೆಕ್ಕೆಜೋಳ, ಶೇಂಗಾ, ಭತ್ತ ಸೇರಿದಂತೆ 19870 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಯಾಗಿದ್ದು, 5314 ಕ್ವಿಂಟಲ್‌ ದಾಸ್ತಾನಿದೆ.

ರೈತರ ಆಕ್ರೋಶ: ರೈತರ ಜಮೀನಿನ ಉತಾರ್‌ ಪಡೆದು ಗರಿಷ್ಠ 5 ಎಕರೆವರೆಗೆ 5 ಬ್ಯಾಗ್‌ ಬಿತ್ತನೆ ಬೀಜವನ್ನು ನೀಡಲಾಗುತ್ತಿದೆ. ರೈತರಿಂದ ಜಮೀನಿನ ದಾಖಲೆ ಪಡೆದು ನಂಬರ್‌ ಹಾಕಿ ಕೂಪನ್‌ ನೀಡಲಾಗುತ್ತಿದೆ. ಆದರೆ, ಬೀಜ ವಿತರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ರೈತರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಜತೆಗೆ, ಕೆಲ ರೈತರು ಹತ್ತಾರು ಉತಾರ್‌ ತಂದು 40-50 ಚೀಲ ಬೀಜ ಪಡೆದು ಹೋಗುತ್ತಿದ್ದಾರೆ. ಇದನ್ನು ನೋಡಿ ಉಳಿದ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ರಾತ್ರಿಯಿಡಿ ಕಾದು ಕುಳಿತರೂ ತಮ್ಮ ಪಾಳಿ ಬಾರದ್ದಕ್ಕೆ ಅಸಮಾಧಾನಗೊಂಡಿದ್ದಾರೆ. ಸಮರ್ಪಕವಾಗಿ ಬೀಜ ವಿತರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಹಾವೇರಿ, ಕರ್ಜಗಿ, ಬಂಕಾಪುರ ಮುಂತಾದ ಕಡೆ ಕೃಷಿ ಇಲಾಖೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ವಾರದ ಹಿಂದೆಯೇ ವಿತರಣೆ ಆರಂಭವಾಗಬೇಕಿತ್ತು. ಆದರೆ ಕೃಷಿ ಇಲಾಖೆ ಸಮಯಕ್ಕೆ ಸರಿಯಾಗಿ ಬೀಜ ವಿತರಣೆ ಮಾಡಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಗೋಲಿಬಾರ್‌ ಆದರೂ ಕಲಿಯದ ಪಾಠ: ಜಿಲ್ಲೆಯಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಅಭಾವದಿಂದ 2008ರಲ್ಲಿ ಗೋಲಿಬಾರ್‌ ನಡೆದು ಇಬ್ಬರು ರೈತರು ಮೃತಪಟ್ಟ ಘಟನೆಯ ಪಾಠ, ಎಚ್ಚರಿಕೆ ಆಡಳಿತ ನಡೆಸುವವರಿಗೆ ಸದಾ ಇರಬೇಕಿದೆ. ಈಗ ಬಿತ್ತನೆ ಬೀಜದ ಸಮಸ್ಯೆ ಎದುರಾದಂತೆ ಕೆಲವೇ ದಿನಗಳಲ್ಲಿ ಗೊಬ್ಬರಕ್ಕೂ ರೈತರಿಂದ ಬೇಡಿಕೆ ಬರಲಿದೆ. ಈಗಾಗಲೇ ಯೂರಿಯಾ ಗೊಬ್ಬರ ವಿತರಣೆ ಬಗ್ಗೆ ರೈತರು ಅಸಮಾಧಾನ ಹೊರಹಾಕಿದ್ದಾರೆ. ಎಕರೆಗೆ ಒಂದೇ ಚೀಲ ಯೂರಿಯಾ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಳೆ ಹೆಚ್ಚಾದರೆ ಗೊಬ್ಬರವನ್ನು ಹೆಚ್ಚು ಪ್ರಮಾಣದಲ್ಲಿ ಹಾಕಬೇಕಾಗುತ್ತದೆ. ಇದಲ್ಲದೆ, ಗೊಬ್ಬರ ಖರೀದಿಸುವ ವೇಳೆ ಅನಾವಶ್ಯಕವಾಗಿ ಇತರೆ ವಸ್ತುಗಳ ಲಿಂಕ್ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಈಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

ಮಳೆಯಾದ್ದರಿಂದ ಒಮ್ಮೆಲೆ ಸೋಯಾಬಿನ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದಿದೆ. ಅದಕ್ಕಾಗಿ ಹೆಚ್ಚಿನ ಕೌಂಟರ್‌ ತೆರೆದು ಬೀಜ ವಿತರಣೆ ಮಾಡುವಂತೆ ಕೃಷಿ ಇಲಾಖೆಗೆ ಸೂಚಿಸಿದ್ದೇನೆ. ಸೋಮವಾರ ಹೆಚ್ಚಿನ ಬಿತ್ತನೆ ಬೀಜ ಜಿಲ್ಲೆಗೆ ಪೂರೈಕೆಯೂ ಆಗಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣಕೋಣ ಗ್ರಿಡ್‌ನಿಂದಲೇ ಮರಳಿ ವಿದ್ಯುತ್ ಸಂಪರ್ಕ: ಗ್ರಾಮಸ್ಥರ ಹರ್ಷ
ನನ್ನ ಗಟ್ಟಿ ಧ್ವನಿ ಅಡಗಿಸಲು ಪ್ಯಾಕೇಜ್ ಮಾಡಿ ಸೋಲಿಸಿದ್ದಾರೆ: ಆಂಜನೇಯ