ನೈಸ್ ಯೋಜನೆ ಹೆಸರಿನಲ್ಲಿ ರೈತರ ಭೂಮಿ ಲೂಟಿ

KannadaprabhaNewsNetwork |  
Published : Aug 18, 2026, 01:45 AM IST
17ಎಚ್ಎಸ್ಎನ್4 :  | Kannada Prabha

ಸಾರಾಂಶ

೧೯೯೫ರಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದಂತೆ ಎಂಒಯು ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪ್ರಾಂತ್ಯದ ಗವರ್ನರ್‌ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್. ಡಿ. ದೇವೇಗೌಡರು ಎಂಒಯು ಮಾಡಿಕೊಂಡು ದೆಹಲಿಗೆ ತೆರಳಿದ್ದರು. ಬಳಿಕ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ನಂತರದ ದಿನಗಳಲ್ಲಿ ಸರ್ಕಾರವೇ ಆ ಕಂಪನಿಯ ಮುಂದೆ ಶರಣಾದಂತಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನೈಸ್ ಯೋಜನೆ ಹಾಗೂ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್ (ಬಿಎಂಐಸಿ) ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೊಳೆನರಸೀಪುರದಲ್ಲಿ ಸೋಮವಾರ ಮಾತನಾಡಿದ ಅವರು, ನೈಸ್ ಯೋಜನೆಗೆ ಸಂಬಂಧಿಸಿದಂತೆ ತಾವು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ನ್ಯಾಯಾಲಯದ ತೀರ್ಪುಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನೇ ಪ್ರಸ್ತಾಪಿಸಿರುವುದಾಗಿ ಸ್ಪಷ್ಟಪಡಿಸಿದರು. ೧೯೯೫ರಲ್ಲಿ ನೈಸ್ ಯೋಜನೆಗೆ ಸಂಬಂಧಿಸಿದಂತೆ ಎಂಒಯು ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕದ ಪ್ರಾಂತ್ಯದ ಗವರ್ನರ್‌ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಎಚ್. ಡಿ. ದೇವೇಗೌಡರು ಎಂಒಯು ಮಾಡಿಕೊಂಡು ದೆಹಲಿಗೆ ತೆರಳಿದ್ದರು. ಬಳಿಕ ಯೋಜನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ. ನಂತರದ ದಿನಗಳಲ್ಲಿ ಸರ್ಕಾರವೇ ಆ ಕಂಪನಿಯ ಮುಂದೆ ಶರಣಾದಂತಾಗಿದೆ ಎಂದು ಆರೋಪಿಸಿದರು.

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವನ್ನು ದಾರಿತಪ್ಪಿಸಿ, ಅಧಿಕಾರಿಗಳು ಹಾಗೂ ಪ್ರಮುಖ ವ್ಯಕ್ತಿಗಳನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಾಲಯಗಳಿಗೆ ತಪ್ಪು ದಾಖಲೆಗಳನ್ನು ಸಲ್ಲಿಸಿ ಕಂಪನಿಯ ಪರವಾಗಿ ತೀರ್ಪುಗಳನ್ನು ಪಡೆಯಲಾಗಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದರು. ದೇಶದ ಇತಿಹಾಸದಲ್ಲೇ ಈ ಯೋಜನೆಗೆ ಸಂಬಂಧಿಸಿದಂತೆ ಇಷ್ಟೊಂದು ಬಾರಿ ನ್ಯಾಯಾಲಯದ ಮೆಟ್ಟಿಲೇರಿರುವ ಉದಾಹರಣೆ ವಿರಳ ಎಂದರು. ಯೋಜನೆ ಆರಂಭವಾಗಿ ಸುಮಾರು ೩೦ ವರ್ಷಗಳಾಗಿದ್ದರೂ, ನಿಗದಿಯಾಗಿದ್ದ ೧೧೧ ಕಿ. ಮೀ. ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಬೆಂಗಳೂರಿನ ಸುತ್ತಮುತ್ತ ಯೋಜನೆ ರೂಪಿಸುವ ಆಸಕ್ತಿ ರಸ್ತೆ ನಿರ್ಮಾಣಕ್ಕಿಂತಲೂ ಅಲ್ಲಿನ ಬೆಲೆಬಾಳುವ ಭೂಮಿಯ ಮೇಲೆ ಕಣ್ಣಿಟ್ಟಿರುವ ಕಾರಣವೇ ಎಂಬ ಅನುಮಾನ ಮೂಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.ಬಿಡದಿ ರೈತರನ್ನು ಒತ್ತಾಯಿಸಬೇಡಿ:ಬಿಡದಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡುತ್ತಿರುವ ಜಾಹೀರಾತುಗಳ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ಇನ್ನೂ ಹತ್ತು ಪುಟಗಳ ಜಾಹೀರಾತು ನೀಡಲಿ, ಆದರೆ ರೈತರು ಮತ್ತು ರೈತ ಮಹಿಳೆಯರು ಏನು ಹೇಳುತ್ತಿದ್ದಾರೆ ಎಂಬುದನ್ನು ಮೊದಲು ಆಲಿಸಲಿ ಎಂದು ಹೇಳಿದರು.

ಬಿಡದಿಯಲ್ಲಿ ರೈತರು ಹಾಗೂ ರೈತ ಕುಟುಂಬಗಳ ಮಹಿಳೆಯರು ಸುಮಾರು ೫೦೦ ದಿನಗಳಿಂದ ಭೂಮಿ ನೀಡುವುದಿಲ್ಲ ಎಂದು ನಿರಂತರ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಪರವಾಗಿ ಧ್ವನಿ ಎತ್ತುವಂತೆ ಅವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಾವು ಅವರ ಪರವಾಗಿ ಮಾತನಾಡುತ್ತಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಅಥವಾ ರಾಜಕೀಯ ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಭೂಮಿ ನೀಡದಿದ್ದರೆ ಗ್ರಾಂಟ್ ಭೂಮಿಯನ್ನು ವಾಪಸ್ ಪಡೆಯುತ್ತೇವೆ ಎಂದು ಬೆದರಿಸುವುದು, ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಕೆಲವು ವ್ಯಕ್ತಿಗಳನ್ನು ಬಳಸಿಕೊಂಡು ರೈತರನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ. ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿದರು. ಬಿಡದಿ ಪ್ರದೇಶದಲ್ಲೇ ಯೋಜನೆ ಕೈಗೊಳ್ಳಬೇಕಾದ ಅಗತ್ಯವೇನು? ಬೇರೆ ಕಡೆ ಜಾಗವಿಲ್ಲವೇ? ಸರ್ಕಾರ ತನ್ನ ತೀರ್ಮಾನದ ಹಿಂದಿರುವ ಕಾರಣಗಳನ್ನು ಜನರ ಮುಂದಿಡಬೇಕು. ಸತ್ಯಶೋಧನಾ ಸಮಿತಿಯ ವರದಿಯನ್ನೂ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಕಾಗೋಡು ತಿಮ್ಮಪ್ಪ ಸಮಿತಿಯಲ್ಲಿ ತಾವು ಸದಸ್ಯರಾಗಿದ್ದಾಗ ಯಾವುದೇ ಕಾರಣಕ್ಕೂ ಟೌನ್‌ಶಿಪ್ ಬರಬಾರದು ಎಂದು ಶಿಫಾರಸು ಮಾಡಲಾಗಿತ್ತು. ಆ ವರದಿಯನ್ನೂ ಸರ್ಕಾರ ತನ್ನ ಜಾಹೀರಾತಿನಲ್ಲಿ ಪ್ರಕಟಿಸಲಿ. ಹಾಗೆ ಮಾಡಿದರೆ ತಮ್ಮ ಹಣವೂ ಉಳಿಯುತ್ತದೆ, ಸರ್ಕಾರ ಆ ಜಾಹೀರಾತು ನೀಡಿದರೆ ತಾವು ಅಭಿನಂದಿಸುವುದಾಗಿ ವ್ಯಂಗ್ಯವಾಗಿ ಹೇಳಿದರು.ನೈಸ್ ಯೋಜನೆ ಟೇಕ್ ಓವರ್ ಮಾಡುವವರು ಯಾರು?

ನೈಸ್ ಯೋಜನೆಯನ್ನು ಈಗ ಕಂಪನಿಯಿಂದ ಯಾರು ಟೇಕ್ ಓವರ್ ಮಾಡಲು ಮುಂದಾಗಿದ್ದಾರೆ ಎಂಬ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

“ಯಾರ ಪಾಲಿಗೆ ಈ ಯೋಜನೆಯನ್ನು ಟೇಕ್ ಓವರ್ ಮಾಡಲು ಹೊರಟಿದ್ದೀರಿ! ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು. ಮಾಧ್ಯಮಗಳ ಮುಂದೆ ಹಾಗೂ ವೇದಿಕೆ ಮೇಲೆ ಭಾಷಣ ಮಾಡುವುದು ಬೇರೆ, ವಾಸ್ತವಾಂಶಗಳನ್ನು ಜನರ ಮುಂದೆ ಇಡುವುದು ಬೇರೆ” ಎಂದು ಟೀಕಿಸಿದರು.

ಸರ್ಕಾರದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ವಿಚಾರದಲ್ಲಿ ತಮ್ಮ ಕುಟುಂಬ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ರಾಜ್ಯದ ಸಂಪತ್ತು ಹಾಗೂ ರೈತರ ಭೂಮಿಯನ್ನು ಮತ್ತೊಂದು ರೀತಿಯಲ್ಲಿ ಲೂಟಿ ಮಾಡಲು ಅವಕಾಶ ನೀಡಬಾರದು ಎಂಬ ಕಾರಣಕ್ಕಾಗಿ ತಾವು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದಾಗಿ ಹೇಳಿದರು. ನೈಸ್ ಯೋಜನೆಗೆ ಸಂಬಂಧಿಸಿದ ನ್ಯಾಯಾಲಯದ ತೀರ್ಪಿನಲ್ಲಿ ಹಲವು ಗಂಭೀರ ಅಂಶಗಳು ಉಲ್ಲೇಖವಾಗಿವೆ ಎಂದು ಹೇಳಿದ ಅವರು, ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗಿದೆ ಎಂಬ ಆರೋಪಗಳಿದ್ದು, ಎರಡು ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಕಂಪನಿ ಸಂಗ್ರಹಿಸಿರುವ ಕುರಿತು ಪ್ರಶ್ನೆಗಳಿವೆ. ತೀರ್ಪು ಬಂದು ಸುಮಾರು ೨೦ ದಿನಗಳಾಗಿದ್ದರೂ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.“ಟೇಕ್ ಓವರ್ ಮಾಡುವ ಚರ್ಚೆಯನ್ನು ಸ್ವಲ್ಪ ದಿನ ನಿಲ್ಲಿಸಿ. ಯಾರಿಗಾಗಿ ಟೇಕ್ ಓವರ್ ಮಾಡಲು ಹೊರಟಿದ್ದೀರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ” ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು. ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ರೈತರ ಭೂಮಿ ಕಸಿಯಬೇಡಿಬಿಡದಿ ರೈತರ ಹೋರಾಟದ ಬಗ್ಗೆ ಯಾರು ಬೇಕಾದರೂ ಟೀಕೆ ಮಾಡಲಿ, ಸಂಶಯ ವ್ಯಕ್ತಪಡಿಸಲಿ. ಆದರೆ ರೈತರು ತಮ್ಮ ಭೂಮಿಯನ್ನು ನೀಡುವುದಿಲ್ಲ ಎಂದು ನಿರಂತರವಾಗಿ ಹೋರಾಟ ನಡೆಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.ರಾಜ್ಯಪಾಲರೂ ಈ ವಿಚಾರದಲ್ಲಿ ಪತ್ರ ಬರೆದು ಸಲಹೆ ನೀಡಿದ್ದಾರೆ. ನೈಸ್ ಕಂಪನಿಯು ಬಿಎಂಐಸಿ ಯೋಜನೆಯ ಹೆಸರಿನಲ್ಲಿ ರೈತರಿಗೆ ಸೂಕ್ತ ಪರಿಹಾರ ನೀಡದೆ ಅನ್ಯಾಯ ಮಾಡಿದೆ ಎಂಬ ಆರೋಪಗಳಿವೆ. ನೈಸ್ ಯೋಜನೆಗೆ ಹೆಚ್ಚುವರಿಯಾಗಿ ನೀಡಿರುವ ಭೂಮಿಯನ್ನು ವಾಪಸ್ ಪಡೆದು, ಅಗತ್ಯವಿದ್ದರೆ ಅಲ್ಲಿ ಟೌನ್‌ಶಿಪ್ ನಿರ್ಮಿಸಬಹುದು ಎಂಬ ಸಲಹೆಯೂ ಬಂದಿದೆ ಎಂದು ತಿಳಿಸಿದರು.“ಈಗ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ. ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸಿಂಗಾಪುರ ಮಾಡುವ ಮಾತು ಕೇಳಿಬಂದಿತ್ತು. ಈಗ ಮುಖ್ಯಮಂತ್ರಿಯಾಗಿ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದೀರಿ. ಆದರೆ ಬ್ರ್ಯಾಂಡ್ ಬೆಂಗಳೂರು ಮಾಡುವ ಹೆಸರಿನಲ್ಲಿ ರೈತರ ಭೂಮಿಯನ್ನು ಲೂಟಿ ಮಾಡಬಾರದು” ಎಂದು ಎಚ್ಚರಿಸಿದರು.==

* ಬಾಕ್ಸ್‌::::: ವಂದೇ ಮಾತರಂ ವಿಚಾರದ ಕಾಂಗ್ರೆಸಿಗರ ಸಣ್ಣತನ ಸರಿಯಲ್ಲ:

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಗೆ ಗೌರವ ನೀಡಿದ ವಿಚಾರವಾಗಿ ಉಂಟಾಗಿರುವ ವಿವಾದದ ಕುರಿತು ಮಾತನಾಡಿದ ಕುಮಾರಸ್ವಾಮಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂಗೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಎಲ್ಲ ರಾಜಕೀಯ ಪಕ್ಷಗಳು ರಾಷ್ಟ್ರಗೀತೆಯಂತೆಯೇ ದೇಶಭಕ್ತಿಯ ಸಂಕೇತವಾಗಿರುವ ವಂದೇ ಮಾತರಂಗೆ ಗೌರವ ನೀಡಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸಣ್ಣತನ ಪ್ರದರ್ಶಿಸುವ ಅಗತ್ಯವಿಲ್ಲ ಎಂದರು. ವಂದೇ ಮಾತರಂ ಗೀತೆಯು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ವೇದಿಕೆಗಳಲ್ಲೂ ಬಳಕೆಯಾಗಿತ್ತು. ಹೀಗಾಗಿ ಈ ವಿಚಾರವನ್ನು ರಾಜಕೀಯಗೊಳಿಸುವ ಬದಲು ಅದರ ಗೌರವವನ್ನು ಕಾಪಾಡಬೇಕು ಎಂದು ಹೇಳಿದರು.

ಸೋನಿಯಾ ಗಾಂಧಿ ಅವರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆದ ಘಟನೆ ಕುರಿತು ಕಾಂಗ್ರೆಸ್ ನೀಡುತ್ತಿರುವ ಸ್ಪಷ್ಟೀಕರಣವನ್ನು ಜನರೇ ಪರಿಶೀಲಿಸಲಿದ್ದಾರೆ. ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದು ಸುಲಭವಲ್ಲ ಎಂದರು.==========

*ಬಾಕ್ಸ್‌:::;ಹನೂರು ಶೂಟೌಟ್: ಗುಂಡಿನ ದಾಳಿ ಬಗ್ಗೆ ತನಿಖೆಯಾಗಲಿ

ಹನೂರಿನಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಶೂಟೌಟ್ ಪ್ರಕರಣದ ಬಗ್ಗೆಯೂ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಘಟನೆಯಿಂದ ಕುಟುಂಬ ಹಾಗೂ ಸ್ಥಳೀಯ ರೈತರಲ್ಲಿ ಆಕ್ರೋಶ ಉಂಟಾಗಿರುವುದು ಸಹಜ. ಸರ್ಕಾರ ಜನರ ಬದುಕಿಗೆ ಭದ್ರತೆ ಹಾಗೂ ಉತ್ತಮ ಜೀವನಕ್ಕೆ ದಾರಿ ಕಲ್ಪಿಸಿದಾಗ ಇಂತಹ ಘಟನೆಗಳು ಕಡಿಮೆಯಾಗುತ್ತವೆ. ಈ ವಿಚಾರವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾರಿಸಿರುವ ರೀತಿಯ ಬಗ್ಗೆಯೂ ಪ್ರಶ್ನೆ ಎತ್ತಿದ ಅವರು, ಆರೋಪಿತರು ಜಿಂಕೆ ಬೇಟೆಗೆ ತೆರಳಿದ್ದರು ಎಂಬ ಮಾಹಿತಿ ಸರ್ಕಾರದಿಂದ ಬಂದಿದೆ. ಮುಖ್ಯಮಂತ್ರಿ ತನಿಖೆಗೆ ಸೂಚಿಸಿರುವುದು ಸ್ವಾಗತಾರ್ಹ. ಆದರೆ ಗುಂಡಿನ ದಾಳಿ ನಡೆಸುವಾಗ ಜೀವಕ್ಕೆ ಅಪಾಯವಾಗದಂತೆ ಕ್ರಮ ಕೈಗೊಳ್ಳಬಹುದಿತ್ತು. ಸ್ಥಳದಲ್ಲೇ ಮೃತಪಟ್ಟಿರುವ ರೀತಿಯಲ್ಲಿ ತಲೆ ಹಾಗೂ ಎದೆ ಭಾಗಕ್ಕೆ ಗುಂಡು ಹಾರಿಸಿರುವುದು ಸರಿಯೇ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮಪ್ಪನಾಣೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಸಮರ್ಥನೆ
ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯಿರಿ