ದಿ.ಕೆ.ಎನ್.ನಾಗೇಗೌಡರ ದೂರದೃಷ್ಟಿ ಫಲದಿಂದ ರೈತರ ಜಮೀನುಗಳಿಗೆ ಇಂದು ನೀರು: ಡಾ.ಎನ್.ಎಸ್.ರಾಮೇಗೌಡ

KannadaprabhaNewsNetwork | Published : Feb 7, 2024 1:48 AM

ಸಾರಾಂಶ

ದಿ.ಕೆ.ಎನ್ ನಾಗೇಗೌಡ ಅವರು ನೀರಾವರಿ ಮತ್ತು ಪಶುಸಂಗೋಪನೆ ಸಚಿವರಾಗಿ ಉತ್ತಮ ಕೆಲಸ ಮಾಡುವ ಜೊತೆಗೆ ಯಾವ ರೀತಿ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಾಲುವೆಗಳಿಗೆ ಹೊಸ ರೂಪ ಕೊಟ್ಟು ಕೊನೆ ಭಾಗಕ್ಕೆ ನೀರು ತಲುಪಿಸಲು ಶ್ರಮಿಸಿದ್ದರು. ಅಂದು ಸಚಿವರ ದೂರದೃಷ್ಟಿ ಫಲವೇ ಇಂದು ರೈತರ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಸಿಗುಂತಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಾಜಿ ಸಚಿವ ದಿ.ಕೆ.ಎನ್.ನಾಗೇಗೌಡರ ದೂರದೃಷ್ಟಿ ಫಲವೇ ಇಂದು ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಹರಿಯಲು ಸಾಧ್ಯವಾಗಿದೆ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಎನ್.ಎಸ್ ರಾಮೇಗೌಡ ಹೇಳಿದರು.

ಪಟ್ಟಣದ ಶಾಂತಿ ಕಾಲೇಜಿನ ಶಾಂತಿ ಸಮುದಾಯ ಭವನದಲ್ಲಿ ನಡೆದ ದಿ.ಕೆ.ಎನ್ ನಾಗೇಗೌಡರ 20ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನೀರಾವರಿ ಮತ್ತು ಪಶುಸಂಗೋಪನೆ ಸಚಿವರಾಗಿ ಉತ್ತಮ ಕೆಲಸ ಮಾಡುವ ಜೊತೆಗೆ ಯಾವ ರೀತಿ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕಾಲುವೆಗಳಿಗೆ ಹೊಸ ರೂಪ ಕೊಟ್ಟು ಕೊನೆ ಭಾಗಕ್ಕೆ ನೀರು ತಲುಪಿಸಲು ಶ್ರಮಿಸಿದ್ದರು. ಅಂದು ಸಚಿವರ ದೂರದೃಷ್ಟಿ ಫಲವೇ ಇಂದು ರೈತರ ಕೊನೆ ಭಾಗದ ಜಮೀನುಗಳಿಗೆ ಸಮರ್ಪಕ ನೀರು ಸಿಗುಂತಾಗಿದೆ ಎಂದರು.

ಶಿಕ್ಷಣದಿಂದಲೇ ಎಲ್ಲ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ತಿಳಿದ ದಿ.ಕೆ.ಎನ್.ನಾಗೇಗೌಡರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದೊಂದಿಗೆ 1970ರಲ್ಲಿ ಶೈಕ್ಷಣಿಕ ಸಂಸ್ಥೆ ಸ್ಥಾಪನೆ ಮಾಡಿದರು. ಇದರ ಪ್ರತಿಫಲವಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತು ಬದುಕನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಮರಿಸಿದರು.

ಹಿರಿಯರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳಲ್ಲಿ ಮೌಲ್ಯವನ್ನು ಹೆಚ್ಚಿಸಲು ಒತ್ತು ನೀಡಬೇಕಿದೆ. ದೇಶದಲ್ಲಿ ಶೇ.50ರಷ್ಟು ಯುವಕರೇ ಇದ್ದು, ಉತ್ತಮ ಸಾಧಕರಾಗಿ ದೇಶವನ್ನು ಅಭಿವೃದ್ಧಿಯತ್ತ ಸಾಗಲು ಹಿರಿಯರ ಮಾರ್ಗದರ್ಶನ ಪಡೆದು ಶೈಕ್ಷಣಿಕ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಹೇಳಿದರು.

ವಿದ್ಯಾರ್ಥಿಗಳು ಪತ್ರಿಕೆಗಳನ್ನು ನಿರಂತರವಾಗಿ ಓದಿ ಎಲ್ಲಾ ಕ್ಷೇತ್ರದ ವಿಷಯಗಳನ್ನು ತಿಳಿದುಕೊಳ್ಳಬೇಕು. ಗೋವು ಸಂರಕ್ಷಣೆಗೆ ಮುಂದಾಗಬೇಕು. ಪರಿಸರ ರಕ್ಷಣೆಗಾಗಿ ಸೂರ್ಯ, ನೀರು, ಗಾಳಿಯ ಮೂಲಕ ಬರುವ ಶಕ್ತಿಯನ್ನು ಇಂಧನವಾಗಿ ಬಳಸಿಕೊಂಡು ಉಪಯೋಗಿಸಿಕೊಳ್ಳಬೇಕೆಂದು ತಿಳಿವಳಿಕೆ ನೀಡಿದರು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್‌ಗೌಡ ಮಾತನಾಡಿ, ಆಧುನೀಕತೆ ತಕ್ಕಂತೆ ಶಾಂತಿ ಸಮುದಾನ ಭವನವನ್ನು ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿವರ್ಷ ಕೆ.ಎನ್.ನಾಗೇಗೌಡರನ್ನು ಸ್ಮರಿಸುವ ಕಾರ್ಯಕ್ರಮ ನಡೆಯಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ದಿ.ಕೆ.ಎನ್.ನಾಗೇಗೌಡರು ಯಾವುದೇ ಖಾತೆಯನ್ನು ಕೊಟ್ಟರೂ ಸಮರ್ಥವಾಗಿ ನಿರ್ವಹಿಸಬಲ್ಲ ರಾಜಕಾರಣಿಯಾಗಿದ್ದರು. ಪಶು ಸಂಗೋಪನೆ ಸಚಿವರಾಗಿದ್ದ ವೇಳೆ ಪಶುಪಕ್ಷಿಗಳಿಗೆ ನ್ಯಾಯವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.

ಸಮಾರಂಭದಲ್ಲಿ ಕರ್ನಾಟಕ ಎಂಜಿನಿಯರ್ ಸಂಘದ ಗೌರವ ಅಧ್ಯಕ್ಷ ಡಿ.ಎಸ್.ದೇವರಾಜು ಅವರಿಗೆ ನೀರಾವರಿ ಕ್ಷೇತ್ರ ಪ್ರಶಸ್ತಿ ಹಾಗೂ ಅರಕೆರೆ ಪಂಚಮುಖಿ ಹಾಲಿನ ಡೇರಿ ಎ.ಸಿ.ರಮೇಶ್ ಅವರಿಗೆ ಪಶುಸಂಗೋಪನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆ ಉಪಾಧ್ಯಕ್ಷ ಎಚ್.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ಖಜಾಂಚಿ ಕೆ.ಸಿ.ಪುಟ್ಟೀರೇಗೌಡ, ಸದಸ್ಯ ಎಂ.ಎನ್. ಅರ್ಜುನ್‌ಗೌಡ, ಕೃಷ್ಣ, ಕಾರ್ಯದರ್ಶಿ ಪುಟ್ಟರಾಜು ಸೇರಿದಂತೆ ಇತರರು ಇದ್ದರು.

Share this article