ಕಡಹಿನಬೈಲು ಏತ ನೀರಾವರಿಯಿಂದ ರೈತರ ಜಮೀನಿಗೆ ಸಮರ್ಪಕ ನೀರು ದೊರೆಯಲಿ: ಎಂ.ಶ್ರೀನಿವಾಸ್

KannadaprabhaNewsNetwork |  
Published : Feb 21, 2025, 11:47 PM IST
ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪದಲ್ಲಿ 1 ಕೋಟಿ ರುಪಾಯಿ ವೆಚ್ಚದ  ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯ ಭವನದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಶಾಸಕ ಟಿ.ಡಿ.ರಾಜೇಗೌಡ ಮತ್ತಿತರರು ಭಾಗವಹಿಸಿದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದ ಕಡಹಿನಬೈಲು ಏತ ನೀರಾವರಿ ಯೋಜನೆಯಿಂದ ಸಂಬಂಧಪಟ್ಟ ಎಲ್ಲಾ ರೈತರಿಗೆ ಸಮರ್ಪಕವಾಗಿ ನೀರು ಸಿಗುವಂತಾಗಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

- ಶೆಟ್ಟಿಕೊಪ್ಪದಲ್ಲಿ ₹1 ಕೋಟಿ ವೆಚ್ಚದ ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದ ಕಡಹಿನಬೈಲು ಏತ ನೀರಾವರಿ ಯೋಜನೆಯಿಂದ ಸಂಬಂಧಪಟ್ಟ ಎಲ್ಲಾ ರೈತರಿಗೆ ಸಮರ್ಪಕವಾಗಿ ನೀರು ಸಿಗುವಂತಾಗಬೇಕು ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.

ಶುಕ್ರವಾರ ಶೆಟ್ಟಿಕೊಪ್ಪದಲ್ಲಿ ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕಡಹಿನಬೈಲು ಏತ ನೀರಾವರಿ ಯೋಜನೆಯಿಂದ ಸುತ್ತ ಮುತ್ತಲಿನ 60 ಕೆರೆಗಳು ಭರ್ತಿ ಯಾಗಿ ಕೆರೆ ಅಚ್ಚಕಟ್ಟು ಭಾಗದ ರೈತರ ಜಮೀನು ನೀರಾವರಿಯಾಗಬೇಕಾಗಿದೆ. ಭದ್ರಾ ಹಿನ್ನೀರಿನಿಂದ ರೈತರ ಜಮೀನುಗಳಿಗೆ ಅನುಕೂಲವಾಗಲಿ ಎಂದು ಬಹಳ ಪ್ರಯತ್ನ ಪಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅನುದಾನ ಬಿಡುಗಡೆ ಮಾಡಿಸಿದ್ದೆ. ಅಂದಿನ ನೀರಾವರಿ ಸಚಿವ ಎಚ್.ಕೆ.ಪಾಟೀಲ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದರು. ಪೈಪ್‌ ಗಳ ದುರಸ್ತಿ, ಕೆರೆ ಹೂಳೆತ್ತಲು ₹9 ಕೋಟಿ ಮಂಜೂರಾಗಿದ್ದರೂ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಿ ವ್ಯವಸ್ಥಿತವಾಗಿ ರೈತರ ಜಮೀನುಗಳಿಗೆ ನೀರು ನೀಡಬೇಕು ಎಂದು ಒತ್ತಾಯಿಸಿದರು.

ಇಂದು ಶಂಕುಸ್ಥಾಪನೆಗೊಂಡ ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಸಮುದಾಯಭವನಕ್ಕೆ ಈಗಾಗಲೇ ₹50 ಲಕ್ಷ ಮಂಜೂರಾಗಿದೆ. ಈ ಸಮುದಾಯ ಭವನದಿಂದ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಹೊನ್ನೇಕೊಡಿಗೆ- ನರಸಿಂಹ ರಾಜಪುರ ಸಂಪರ್ಕ ಸೇತುವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾರಂಭದಲ್ಲಿ ₹5 ಕೋಟಿ ಮಂಜೂರು ಮಾಡಿದ್ದರು. ನಂತರ ₹20 ಕೋಟಿಗೆ ಏರಿಕೆಯಾಯಿತು. ಈಗ ₹35 ಕೋಟಿ ವೆಚ್ಚವಾಗಲಿದೆ. ಸೇತುವೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ಕಡಹಿನಬೈಲು ಏತ ನೀರಾವರಿ ಯೋಜನೆ ಪೈಪ್‌ ರಿಪೇರಿಗಳಿಗೆ ತಾತ್ಕಾಲಿಕವಾಗಿ ₹25 ಲಕ್ಷ ಮಂಜೂ ರಾಗಿದೆ. ಸಮ್ಮಿಶ್ರ ಸರ್ಕಾರ ಇದ್ದಾಗ ಕೆರೆ ಹೂಳೆತ್ತಲು, ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ ಮತ್ತೆ ₹15 ಕೋಟಿ ಮಂಜೂರು ಮಾಡುವಂತೆ ನಾನು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ಅರಣ್ಯ ಇಲಾಖೆ ಜಾಗದಲ್ಲಿ ಬರುತ್ತದೆ ಎಂದು ಅರಣ್ಯ ಇಲಾಖೆ ತಕರಾರು ತೆಗೆದಿತ್ತು. ಅದನ್ನು ಕ್ಲಿಯರ್ ಮಾಡಲಾಗಿದೆ. ಮಲೆನಾಡು ಭಾಗದಲ್ಲಿ ಕಾಡಾನೆ, ಕಾಡು ಕೋಣ, ಕಾಡು ಹಂದಿಯಿಂದ ರೈತರ ಬೆಳೆ ನಾಶವಾಗುತ್ತಿದೆ. ಕಾಡಾನೆಯಿಂದ 3 ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂದೆ ಮೃತಪಟ್ಟ ರೈತರಿಗೆ ₹5 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಈಗ ₹15 ಲಕ್ಷಕ್ಕೆ ಏರಿಸಲಾಗಿದೆ ಎಂದರು.

ಕೊಪ್ಪದಿಂದ ಶಿವಮೊಗ್ಗ ಏರ್‌ ಪೋರ್ಟ್ ವರೆಗೆ ರಸ್ತೆಯನ್ನು ರಾಷ್ಟೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲು ಶಿಪಾರಸು ಮಾಡಲಾಗಿದೆ. ಶೃಂಗೇರಿ ಕ್ಷೇತ್ರದ ಎಲ್ಲಾ ಲೋಕೋಪಯೋಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಅಗತ್ಯ ಇರುವ ಕಡೆ ಮರು ಡಾಂಬರೀಕರಣ ಮಾಡಲಾಗಿದೆ. ಗ್ರಾಮೀಣ ರಸ್ತೆಗೆ ₹10 ಕೋಟಿ ಮಂಜೂರಾಗಿದೆ ಎಂದು ವಿವರಿಸಿದರು.

ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡರು ಕಡಹಿನಬೈಲು ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಇತರ ಕಾಮಗಾರಿಗೆ ಒಟ್ಟು ₹7. 95ಕೋಟಿ ಅನುದಾನ ನೀಡಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚಗಳ ಅಭಿವೃದ್ಧಿಗೂ ಯಾವುದೇ ಬೇಧ ಭಾವ ಮಾಡದೆ ಸಮಾನವಾಗಿ ಅನುದಾನ ನೀಡಿದ್ದಾರೆ. ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ 2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮನ ಒಲಿಸಿ ಬಕ್ರಿ ಹಳ್ಳ ಕಡಹಿನಬೈಲು ಏತ ನೀರಾವರಿಗೆ ಹಣ ಕೊಡಿಸಿದ್ದರು. ಶೆಟ್ಟಿಕೊಪ್ಪ ಸರ್ಕಾರಿ ಶಾಲೆ ಸಭಾಂಗಣಕ್ಕೂ ಅನುದಾನ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಮುಖಂಡ ಎನ್‌.ಎಂ.ಕಾಂತರಾಜ್, ಅತಿಥಿಗಳಾಗಿ ಶಬರೀಶ ಹಿಂದುಳಿದ ವರ್ಗಗಳ ಸೇವಾ ಸಂಘದ ಅಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ, ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್‌, ಎ.ಬಿ.ಮಂಜುನಾಥ್‌, ಪೂರ್ಣಿಮಾ, ವಾಣಿ ನರೇಂದ್ರ, ಶೈಲಾ ಮಹೇಶ್, ಲಿಲ್ಲಿ ಮಾತುಕುಟ್ಟಿ, ರವೀಂದ್ರ,ಮುಖಂಡರಾದ ಬಿ.ಕೆ.ಜಾನಕೀರಾಂ, ಎಂ.ಟಿ.ಕುಮಾರ್, ಶೆಟ್ಟಿಕೊಪ್ಪ ಮಹೇಶ್‌, ಈಶ್ವರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!