ರಾಮನಗರ: ಬಿಡದಿ ಟೌನ್‌ಶಿಪ್ ನೆಪದಲ್ಲಿ ಕೃಷಿ ಭೂಮಿ ಕಸಿದು ಅಧಿಕಾರ ದರ್ಪ ಮೆರೆಯುತ್ತಿರುವ ಜಿಲ್ಲಾಧಿಕಾರಿ ನಡೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ನಗರದಲ್ಲಿ ಬುಧವಾರ ಪೊರಕೆ ಚಳವಳಿ ನಡೆಸಿದರು.
ಜಿಲ್ಲಾಧಿಕಾರಿಗಳು ಪ್ರಜಾಪ್ರಭುತ್ವ ಆಡಳಿತವನ್ನು ಕಡೆಗಣಿಸಿ, ಸರ್ವಾಧಿಕಾರಿ ಶೈಲಿಯಲ್ಲಿ ಆಡಳಿತ ನಡೆಸುತ್ತಿರುವುದು ಆತಂಕಕಾರಿ ಮಾತ್ರವಲ್ಲದೆ ಅಪಾಯಕಾರಿ. ಜನಪ್ರತಿನಿಧಿಗಳು, ಕಾನೂನು ಹಾಗೂ ಸಂವಿಧಾನಕ್ಕಿಂತಲೂ ಮೇಲಾಗಿ ತಾವು ನಿಲ್ಲಬಹುದು ಎಂಬ ಭ್ರಮೆಯಲ್ಲಿ ಜಿಲ್ಲಾಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಬಿಡದಿ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನದ ಅಡಿಯಲ್ಲಿ ಭದ್ರ ಪಡಿಸಲಾದ ಆಸ್ತಿ ಹಕ್ಕನ್ನು ನಿರ್ಲಕ್ಷ್ಯ ಮಾಡಲಾಗಿದೆ. ಸಾಮಾಜಿಕ ಪರಿಣಾಮ ಅಧ್ಯಯನ, ಸಾರ್ವಜನಿಕ ವಿಚಾರಣೆ, ಸಮರ್ಪಕ ಪರಿಹಾರ ಹಾಗೂ ಪುನರ್ವಸತಿ ಪ್ರಕ್ರಿಯೆಗಳನ್ನು ಜಾಣ್ಮೆಯಿಂದಲೇ ಕೈಬಿಡಲಾಗಿದೆ. ಇದು ಅಭಿವೃದ್ಧಿಯಲ್ಲ, ರೈತರ ಮೇಲೆ ನಡೆಸುತ್ತಿರುವ ಆಡಳಿತಾತ್ಮಕ ದೌರ್ಜನ್ಯ ಎಂದು ದೂರಿದರು.ಈ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಸಲ್ಲಿಸಿದಾಗ 2600 ಎಕರೆ ಸರ್ಕಾರಿ ಜಾಗವಿದೆ ಎಂದು ಅಧಿಕೃತವಾಗಿ ಘೋಷಿಸಿದ್ದರು. ಅದೀಗ 720 ಎಕರೆಗೆ ಬಂದಿದೆ. ಉಳಿದ 1880 ಎಕರೆ ಸರ್ಕಾರಿ ಭೂಮಿ ಏನಾಯಿತು ಎಂಬುದರ ಬಗ್ಗೆ ಸರ್ಕಾರ ಜನತಾ ನ್ಯಾಯಾಲಯಕ್ಕೆ ಸೃಷ್ಟೀಕರಣ ನೀಡಬೇಕು. ಈ ಬಗ್ಗೆ ದಿವ್ಯ ಮೌನ ವಹಿಸಿದರೆ ಅದರ ಹೊಣೆಗಾರಿಕೆಯ ಭಾಗವಾಗಿ ಜಿಲ್ಲಾಧಿಕಾರಿಗಳ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಅಮಾನತುಗೊಳಿಸಿ ಉನ್ನತ ನ್ಯಾಯಾಧೀಶರ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಜಾನುವಾರುಗಳ ಬದುಕಿನ ಆಧಾರವಾದ ಗೋಮಾಳ ಭೂಮಿಯನ್ನು ಜಿಲ್ಲಾಧಿಕಾರಿಗಳು ಕಾನೂನು ಮತ್ತು ಸರ್ಕಾರಿ ನೀತಿಗಳಿಗೆ ವಿರುದ್ಧವಾಗಿ ಮಂಜೂರು ಮಾಡಿದ್ದಾರೆ. ಇದು ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲ. ಸಾರ್ವಜನಿಕ ಸಂಪತ್ತಿನ ಮೇಲೆ ನಡೆಸುತ್ತಿರುವ ವ್ಯವಸ್ಥಿತ ದೋಚಾಟದಂತಾಗಿದೆ. ಜಿಲ್ಲಾಧಿಕಾರಿಗಳು ಆಡಳಿತ ಎಂದರೆ ಆದೇಶ - ಜನ ಎಂದರೆ ಮೌನ ಎಂಬ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.ಜಿಲ್ಲಾಧಿಕಾರಿಗಳು ರೈತರ ಧ್ವನಿಯನ್ನು ಮೌನಗೊಳಿಸಲು ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಪೊಲೀಸ್ ರಾಜ್ಯದಂತೆ ಪರಿವರ್ತಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಶಾಶ್ವತ ಸ್ವರೂಪದಲ್ಲಿ ಸೆಕ್ಷನ್ 144 ಹೇರಲಾಗಿದೆ. ಇದು ಸಿಆರ್‌ಪಿಸಿ ಸೆಕ್ಷನ್ 144ರ ಸ್ಪಷ್ಟ ದುರುಪಯೋಗವಾಗಿದ್ದು, ಚಳವಳಿಗಳನ್ನು ಹತ್ತಿಕ್ಕುವ ವ್ಯವಸ್ಥಿತ ಪಿತೂರಿ ಎಂದು ಪ್ರತಿಭಟನಾಕಾರರು ದೂರಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದ ರೈತರು ತಮ್ಮ ಬೇಡಿಕೆಗಳು ಈಡೇರದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯ ಪ್ರಕಾಶ್, ರೈತಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಯ್ಯ, ರಾಜ್ಯ ಸಂಚಾಲಕ ಚೀಲೂರು ಮುನಿರಾಜು, ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಗೌರವಾಧ್ಯಕ್ಷ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ನಾಗರಾಜು, ಕಾರ್ಯದರ್ಶಿ ರಮ್ಯಾ ರಾಮಣ್ಣ, ನೇತ್ರಾವತಿ, ಬೆಂಗಳೂರು ಘಟಕ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರತ್ನಮ್ಮ, ಕೆಆರ್‌ಎಸ್ ಉಸ್ತುವಾರಿ ಎಲ್.ಜೀವನ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಸಾಗರ್, ಯುವ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ರಾಮ್ ಪ್ರಸಾದ್ ಗೌಡ, ಜಯ ಕರ್ನಾಟಕ ಜನಪರ ವೇದಿಕೆ ಸಂಚಾಲಕ ಸೇಬೋ ರಾಧಾಕೃಷ್ಣ, ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಕನ್ನಡಿಗರ ವಿಜಯ ಸೇನೆ ಮುಖಂಡ ವಿಜಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಬಾಕ್ಸ್..............ರೈತರ ಬೇಡಿಕೆಗಳು ಏನೇನು ?
ಎಪಿಎಂಸಿಗಳಲ್ಲಿ ನಿಲ್ಲದ ಕಮಿಷನ್ ದಂದೆ ಕೂಡಲೇ ನಿಲ್ಲಿಸಬೇಕು. ಆನೇಕಲ್ ತಾಲೂಕು ಸರ್ಜಾಪುರ ಭಾಗದ 2500 ಎಕರೆ ಕೃಷಿ ಭೂಮಿಯನ್ನು ಕೆಐಡಿಬಿಗೆ ಭೂ ಸ್ವಾಧೀನ ಹೊರಟಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಕೈಬಿಡಬೇಕು. ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷವನ್ನು ತಪ್ಪಿಸಬೇಕು. ಕೃಷಿ ಪಂಪ್ ಸೆಟ್‌ಗಳ ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.ಬೀದಿನಾಯಿಗಳ ಸಮಸ್ಯೆ ನಿವಾರಿಸಬೇಕು, ಫಾರಂ ನಂ.50, 53ರಲ್ಲಿ ಅಕ್ರಮ ಸಾಗುವಳಿಯ ಸಕ್ರಮ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಸರ್ಕಾರದ ಆದೇಶದನ್ವಯ ಪರಿಗಣಿಸಬೇಕು. ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆಯಿಂದ ಕೂಡಿದ್ದು, ಸೂಕ್ತ ತನಿಖೆ ನಡೆಸಬೇಕು. ರೈತರು, ಕನ್ನಡ ಹಾಗೂ ದಲಿತ ಪರ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್ ಪಡೆಯಬೇಕು ಎಂದು ರೈತರು ಒತ್ತಾಯಿಸಿದರು.
4ಕೆಆರ್ ಎಂಎನ್ 1.ಜೆಪಿಜಿರಾಮನಗರದಲ್ಲಿ ಬುಧವಾರ ರೈತರು ಮತ್ತು ರೈತ ಮಹಿಳೆಯರು ಪೊರಕೆ ಚಳವಳಿ ನಡೆಸಿದರು.