ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತು ಹಿರಿಯ ರೈತ ಮುಖಂಡ ಎಂ.ವಿ.ರಾಜೇಗೌಡ ನೇತೃತ್ವದಲ್ಲಿಂದು ಹೇಮಾವತಿ ಕಚೇರಿಗೆ ಮುತ್ತಿಗೆ ಹಾಕಿ ಎಂಜಿನಿಯರುಗಳಿಗೆ ದಿಗ್ಬಂಧನ ವಿಧಿಸಿದರು.
ಕಳೆದ ಎರಡು ದಿನಗಳ ಹಿಂದೆ ಹೇಮೆ ನೀರಿಗಾಗಿ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದಾಗ ಹೇಮಾವತಿ ಜಲಾಶಯದ ಮುಖ್ಯ ಎಂಜಿನಿಯರ್ ಅವರು ರೈತ ಮುಖಂಡರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೆ.5 ರಂದು ಪಟ್ಟಣಕ್ಕೆ ಆಗಮಿಸಿ ರೈತರ ಅಹವಾಲು ಆಲಿಸಿ ಹೇಮೆ ನೀರಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಾಗಿ ಭರವಸೆ ನೀಡಿದ್ದರು.ಆದರೆ, ಕೊಟ್ಟ ಮಾತಿನಂತೆ ಇಂದು ಸ್ಥಳಕ್ಕೆ ಆಗಮಿಸದ ಎಂಜಿನಿಯರ್ ತಮ್ಮ ಬದಲು ಜಲಾಶಯ ಸುರಕ್ಷತಾ ಎಂಜಿನಿಯರ್ ಪ್ರಶಾಂತ್ ಅವರನ್ನು ಕಳುಹಿಸಿಕೊಟ್ಟಿದ್ದರು. ಹೇಮೆ ನೀರಿಗಾಗಿ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ಸ್ಥಳಕೆ ಬಾರದ ಮುಖ್ಯ ಎಂಜಿನಿಯರ್ ಅವರ ವರ್ತನೆ ಖಂಡಿಸಿದರು.
ಹೇಮಾವತಿ ಬಯಲಿನಲ್ಲಿ ತೀವ್ರ ಬರಗಾಲವಿದೆ. ಅಂತರ್ಜಲಮಟ್ಟ ಕುಸಿದಿದೆ. ಬೋರ್‌ವೆಲ್ ಗಳು ಸ್ಥಗಿತಗೊಳ್ಳುತ್ತಿವೆ. ಆದರೆ, ಹೇಮಾವತಿ ಜಲಾಶಯದಲ್ಲಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಿ ಈ ಭಾಗದ ರೈತರಿಗೆ ಅಗತ್ಯ ನೀರು ಬಿಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕರೋಟಿ ತಮ್ಮಯ್ಯ, ಮುದ್ದುಕುಮಾರ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಬ್ಯಾಲದಕೆರೆ ಶಿವಣ್ಣ, ನಾಗೇಗೌಡ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.