ಹೊಸಪೇಟೆ: ರೈತರೇ ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಮೂಲಕ ಸರ್ಕಾರ ಮಾಡುವ ಕೆಲಸಕ್ಕೆ ಮುಂದಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ಪೀಳಿಗೆಗೆ ತುಂಗಭದ್ರಾ ಜಲಾಶಯ ಉಳಿಸುವ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ 3 ರಾಜ್ಯಗಳ 8 ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದದ ಮೂರು ರಾಜ್ಯಗಳ ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲದಿರುವುದು ನೋವಿನ ಸಂಗತಿ. ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳು ತುಂಬಿಕೊಂಡು ನೀರು ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಆತಂಕ ಉಂಟಾಗಿದೆ. ರೈತರ ಸಮಸ್ಯೆಗಳನ್ನು ಸರ್ಕಾರ ಅರ್ಥಮಾಡಿಕೊಂಡು ಹೂಳು ತೆಗೆಯಲು ಯಾವಾಗಲೋ ಮುಂದಾಗಬೇಕಾಗಿತ್ತು. ಸರ್ಕಾರ ಮಾಡುವಂತಹ ಕೆಲಸವನ್ನು ರೈತರೇ ಮಾಡುತ್ತಿರುವುದನ್ನು ನಾವೆಲ್ಲರೂ ಮೆಚ್ಚಲೇಬೇಕಾಗಿದೆ ಎಂದು ಹೇಳಿದರು.
ಮನುಷ್ಯನಿಗೆ ನೀರು ಅತ್ಯಮೂಲ್ಯವಾಗಿದ್ದು, ಮನುಷ್ಯ ಜೀವಿಸಲು ಮತ್ತು ವ್ಯವಸಾಯಕ್ಕೆ ನೀರು ಬೇಕೇಬೇಕು. ನೀರಿನ ಬಗ್ಗೆ ತಾತ್ಸಾರ ಬೇಡ, ನಮ್ಮ ಹಿರಿಯರು ಹಳ್ಳ, ಕೆರೆ, ಜಲಾಶಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅವುಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬುತ್ತಿರುವ ಬಗ್ಗೆ ಕೆಲ ವರ್ಷಗಳಿಂದ ಹೇಳುತ್ತ ಬಂದರೂ ಇದುವರೆಗೂ ಹೂಳು ತೆಗೆಯಲು ಸರ್ಕಾರಗಳು ಮುಂದಾಗಿರುವುದು ದುರಂತದ ಸಂಗತಿಯಾಗಿದೆ ಎಂದರು.ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳನ್ನು ತಂದು ಜಲಾಶಯದ ಹೂಳು ತೆಗೆಸುವ ಯೋಜನೆ ಹಾಕಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ರೈತರು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು
ಕಾರ್ಯಕ್ರಮದಲ್ಲಿ ಕುರುಗೋಡಿನ ಪ್ರಭು ಮಹಾಸ್ವಾಮಿಗಳು, ಸೋಮಸಮುದ್ರದ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀಧರಗಡ್ಡೆಯ ಕೊಟ್ಟೂರು ದೇಶಿಕೇಂದ್ರ ಸ್ವಾಮಿಗಳು, ದರೂರಿನ ಕೊಟ್ಟೂರು ಮಹಾಸ್ವಾಮಿಗಳು, ಕೊಂಚಗೇರಿ ರುದ್ರಪ್ಪ ತಾತನವರ ಮಠದ ಶಿವಪ್ಪ ತಾತನವರು, ತುಂಗಭದ್ರಾ ರೈತ ಸಂಘದ ಉಪಾಧ್ಯಕ್ಷ ವೀರಭದ್ರ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರುಗಪ್ಪ ನಾಯಕ ಸೇರಿದಂತೆ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಹಾಗೂ ಬಳ್ಳಾರಿ, ಸಿರುಗುಪ್ಪ, ಕುರುಗೋಡು ಭಾಗದ ರೈತರು ಬಿಸಿಲನ್ನು ಲೆಕ್ಕಿಸದೇ ರೈತರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಹೂಳನ್ನು ತಮ್ಮ ಹೊಲಗದ್ದೆಗಳಿಗೆ ತೆಗೆದುಕೊಂಡು ಹೋಗುತ್ತಿರುವುದು ವಿಶೇಷವಾಗಿತ್ತು.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಿತ್ತುಕೊಂಡು ಹೋದಾಗ ಅದನ್ನು ತಕ್ಷಣವೇ ಬದಲಿಸದೇ ಇದ್ದರೆ ಉತ್ತರ ಕರ್ನಾಟಕದ ಜನರು ದಂಗೆ ಏಳುತ್ತಿದ್ದರು ಎನ್ನುವ ಭಯದಿಂದ ಸರ್ಕಾರಗಳು ಕ್ರಸ್ಟ್ ಗೇಟ್ ಬದಲಿಸಿದವು. ಹೂಳಿನ ವಿಚಾರದಲ್ಲಿಯೂ ರೈತರು ಸಂಘಟನೆಯಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡುವಂತಹ ಹೋರಾಟಗಳು ಅಗತ್ಯವಿದೆ ಎಂದು ಹೊಸಪೇಟೆ ಕೊಟ್ಟೂರುಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.