ಕೊಪ್ಪಳ: ಏಕಾಏಕಿ ವಿದ್ಯುತ್ ಪೂರೈಕೆ ಸಮಯ ಕಡಿತ ಹಾಗೂ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೊಚ್ಚಿಗೆದ್ದ ಅಳವಂಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಸೋಮವಾರ ತಾಲೂಕಿನ ಅಳವಂಡಿ ಗ್ರಾಮದ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ಸಿದ್ದೇಶ್ವರ ಮಠದಿಂದ ರೈತರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನಾ ಜಾಥಾ ನಡೆಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಜೆಸ್ಕಾಂ ಕಚೇರಿ ತಲುಪಿ ಪ್ರತಿಭಟನೆ ನಡೆಸಿದರು.
ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ರೈತರ ಪರವಾಗಿ ನಿಲ್ಲುವುದು ಯಾವುದೇ ಪಕ್ಷ, ಪಂಗಡದವರ ಆದ್ಯ ಕರ್ತವ್ಯ. ರೈತ ಶಕ್ತಿ ಇಲ್ಲದೆ ಜಗತ್ತಿನ ವ್ಯವಸ್ಥೆಯೇ ನಡೆಯುವುದಿಲ್ಲ. ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ ಮಾತನಾಡಿ, ರಾಜ್ಯದಲ್ಲಿ ಬರದ ವಾತಾವರಣವಿದ್ದು, ರೈತರ ಪಂಪ್‌ಸೆಟ್‌ಗಳಿಗೆ ನಿಗದಿಯಂತೆ 7 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಅಸಮರ್ಪಕ ವಿದ್ಯುತ್‌ನಿಂದ ಬೆಳೆಗಳು ಒಣಗುತ್ತಿದ್ದು, ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ ಮಾತನಾಡಿ, ರೈತರಿಗೆ ನಿಗದಿಪಡಿಸಿರುವ ಏಳು ಗಂಟೆ ವಿದ್ಯುತ್‌ನಲ್ಲಿ ಒಂದು ಗಂಟೆ ಕಡಿತ ಮಾಡಿ, ಆರು ಗಂಟೆ ನೀಡಲಾಗುತ್ತಿದೆ. ಅದು ನಿರಂತರವಾಗಿ ಪೂರೈಕೆಯಾಗುತ್ತಿಲ್ಲ. ಹಗಲು ನಾಲ್ಕು ಗಂಟೆ, ರಾತ್ರಿ ಎರಡು ಗಂಟೆ ಎಂದು ವಿದ್ಯುತ್ ನೀಡುತ್ತಿರುವುದರಿಂದ ರೈತರಿಗೆ ಭಾರಿ ತೊಂದರೆಯಾಗಿದೆ ಎಂದರು.
ಎರಡು ದಿನ ಕಾಲವಕಾಶ ಕೇಳಿದ ಜೆಸ್ಕಾಂ: ಜೆಸ್ಕಾಂ ಎಇಇ ಸೈಯದ್ ಮಾತನಾಡಿ, ಸರ್ಕಾರದ ಆದೇಶದಂತೆ ಬೆಳಗ್ಗೆ ಮತ್ತು ಸಂಜೆ ಲೋಡ್‌ಶೆಡ್ಡಿಂಗ್ ಇರುವುದರಿಂದ ರೈತರಿಗೆ ಎರಡು ಪಾಳಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ. ಒಂದು ಪಾಳಿಗೆ ಹಗಲಿನಲ್ಲಿ ಆರು ಗಂಟೆ ನಿರಂತರ ವಿದ್ಯುತ್ ನೀಡಲಾಗುತ್ತಿದ್ದು, ಇನ್ನೊಂದು ಪಾಳಿಗೆ ನಾಲ್ಕು ಗಂಟೆ ಹಗಲು ಹಾಗೂ ಉಳಿದ ಎರಡು ಗಂಟೆ ರಾತ್ರಿ ವಿದ್ಯುತ್ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಪಾಳಿ ಬದಲಾಯಿಸಲಾಗುತ್ತದೆ ಎಂದು ವಿವರಿಸಿದರು.
ಡಾ. ಬಸವರಾಜ ಕ್ಯಾವಟರ, ಮಹಾಂತೇಶ ಪಾಟೀಲ ಮೈನಳ್ಳಿ, ಪ್ರದೀಪ ಹಿಟ್ನಾಳ, ವೀರೇಶ ಸಜ್ಜನ, ಬಸವರಾಜ ಬೈರಾಪುರ, ಶ್ರೀನಿವಾಸ ಕಲಾದಗಿ, ಸುನೀಲ ಹೆಸರೂರ, ಹನುಮಂತಪ್ಪ ಉಂಕಿ, ಮಹೇಶ ಮಂಗಳಾಪುರ, ಗವಿರಾಜ ಗೊರವರ, ಅಂದಪ್ಪ ಯಲ್ಲಮ್ಮನವರ, ಗುರಪ್ಪ ಗೋಡೆಕಾರ, ಶರಣಪ್ಪ ಮಡಿವಾಳರ, ಅಜಯ ಪಾಟೀಲ, ನೀಲಕಂಠಯ್ಯ ಹಿರೇಮಠ, ಪರಸಪ್ಪ ನಿಂಗಾಪುರ, ರಮೇಶ ಗುದ್ಲಾನೂರ, ಪಾಂಡು ಬೋರಿನ, ಗವಿಸಿದ್ದಪ್ಪ ಗದ್ದಿಕೇರಿ, ಶಿವಪ್ಪ ಗಾಣಿಗೇರ, ಯೋಗಾನಂದ ಲೇಬಗೆರಿ, ಅಶೋಕ, ಗೀತಾ ಮುತ್ತಾಳ, ವಾಣಿಶ್ರೀ ಮಠದ, ಕೀರ್ತಿ ಪಾಟೀಲ, ಶೋಭಾ ನಗರಿ ಪಾಲ್ಗೊಂಡಿದ್ದರು.