ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ಕಳೆದ ವರ್ಷ ಸುಮಾರು 1.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಆದರೆ, ಈ ವರ್ಷ ಮಳೆ ಕೊರತೆಯಿಂದ ಶೇ.23ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದರು.
ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಪದ್ಧತಿಯಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಹೀಗಾಗಿ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಇಂತಹ ವೇದಿಕೆಗಳಲ್ಲಿ ಚರ್ಚೆಯಾಗಬೇಕು ಎಂದರು.ಕೃಷಿ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು, ಕೃಷಿಯಲ್ಲಿ ಹೊಸ ತಂತ್ರಜ್ಞಾನ, ನೀರಿನ ಸಮರ್ಪಕ ಬಳಕೆ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಕುರಿತು ವಿಚಾರ ಗೋಷ್ಠಿಗಳಲ್ಲಿ ಚರ್ಚೆ ನಡೆಯಬೇಕು. ರಸಗೊಬ್ಬರದ ಅತಿಯಾದ ಬಳಕೆ ಕಡಿಮೆ ಮಾಡಿ ಮಣ್ಣಿನ ಆರೋಗ್ಯದ ಜೊತೆಗೆ ಜನರ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ರೈತರ ಆದಾಯ ಹೆಚ್ಚಿಸುವ ಜೊತೆಗೆ ಆರೋಗ್ಯಕರ ಕೃಷಿ ಪದ್ಧತಿಗಳತ್ತ ಗಮನ ಹರಿಸುವುದು ಇಂದು ಅಗತ್ಯವಾಗಿದೆ ಎಂದರು.
ರಾಜ್ಯದಲ್ಲಿ 224 ಎಂಜಿನಿಯರಿಂಗ್ ಕಾಲೇಜುಗಳಿವೆ. ವರ್ಷಕ್ಕೆ ಸುಮಾರು 1.65 ಲಕ್ಷ ಎಂಜಿನಿಯರ್‌ಗಳು ಹೊರ ಬರುತ್ತಿದ್ದಾರೆ. ಯುವಕರಿಗೆ ಶಿಕ್ಷಣದ ಜೊತೆಗೆ ಅವರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ಬಗ್ಗೆಯೂ ಸಮಾಜ ಚಿಂತಿಸಬೇಕಾಗಿದೆ ಎಂದರು.
ಈ ಹಿಂದೆ ಪುಸ್ತಕಗಳ ಮೂಲಕ ಸಾಹಿತ್ಯವನ್ನು ಓದುವ ಮತ್ತು ಚರ್ಚಿಸುವ ಸಂಸ್ಕೃತಿ ಹೆಚ್ಚಾಗಿತ್ತು. ಇಂದು ಮೊಬೈಲ್ ಮೂಲಕ ಸಾಹಿತ್ಯವನ್ನು ಓದುವ, ನೋಡುವ ಹಾಗೂ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ತಂತ್ರಜ್ಞಾನದ ಬದಲಾವಣೆಯನ್ನು ಕನ್ನಡ ಸಾಹಿತ್ಯವೂ ಅಳವಡಿಸಿಕೊಂಡು ಹೊಸ ಪೀಳಿಗೆಯನ್ನು ಕನ್ನಡದತ್ತ ಸೆಳೆಯಬೇಕು ಎಂದರು.
ಸಮ್ಮೇಳನದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಸಾನಿಧ್ಯ ವಹಿಸಿದ್ದರು. ಶಾಸಕ ಕೆ.ಎಂ.ಉದಯ್, ಸಮ್ಮೇಳನಾಧ್ಯಕ್ಷೆ ಡಾ.ಎಂ.ಕೆಂಪಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ವಸುಂದರಾ ಕದಲೂರು, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ತಾಲೂಕು ಕಸಾಪ ಅಧ್ಯಕ್ಷ ಕೋಣಸಾಲೆ ಸುನೀಲ್ ಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬಸವರಾಜ್ ಸೇರಿದಂತೆ ಸಾಹಿತ್ಯಾಸಕ್ತರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.