ಮಳೆ ಕೊರತೆಯಿಂದ ರೈತರ ಬದುಕು ಮೂರಾಬಟ್ಟೆ

KannadaprabhaNewsNetwork |  
Published : Jul 20, 2026, 02:00 AM IST
ಚಿತ್ರ ಶೀರ್ಷಿಕೆ -ಆಳಂದ ಡ್ರಾಟ್‌ಆಳಂದ: ಖಜೂರಿ ವಲಯದ ಖಂಡಾಳ ಗ್ರಾಮದ ರೈತರೊಬ್ಬರು    ಮಳೆಯಿಲ್ಲದೆ ತೇವಾಂಶ ಕೊರತೆಯಾಗಿ ಬೆಳೆ ಬಾಡಿ ಒಣಗಲಾರಂಬಿಸಿರುವುದು ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ವಿ ಅವರಿಗೆ ತೋರಿಸಿದರು. ತಾಂತ್ರಿಕ ಅಧಿಕಾರಿ ಬಿ.ಎನ್. ಬಿರಾದಾರ ಇದ್ದರು.  | Kannada Prabha

ಸಾರಾಂಶ

Farmers' lives in shambles due to lack of rain.

-ಶೇ. ೪೩ರಷ್ಟು ಮಾತ್ರ ಬಿತ್ತನೆ, ಒಣಗುವ ಭೀತಿಯಲ್ಲಿ ಬೆಳೆಗಳು । ಕೇಳೋರಿಲ್ಲ ಆಳಂದ ರೈತರ ಸಂಕಷ್ಟ । ರೈತರಲ್ಲಿ ಆತಂಕ

-----

ಕನ್ನಡಪ್ರಭ ವಾರ್ತೆ ಆಳಂದ

ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿರುವ ಆಳಂದದಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಳಂದ ತಾಲೂಕಿನ ಕೃಷಿ ಚಟುವಟಿಕೆ ತೀವ್ರ ಕುಸಿದಿವೆ.

ಮಳೆ ಕೊರತೆಯಿಂದ ನಾಟಿ ಮಾಡಿದ ಹೊಲಗಳಲ್ಲಿ ಬೆಳೆ ನೆಲಕ್ಕಚ್ಚುವ ಸ್ಥಿತಿ ನಿರ್ಮಾಣವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಜೂನ್ ೧ರಿಂದ ಜುಲೈ ೧೩ರವರೆಗೆ ತಾಲೂಕಿನಾದ್ಯಂತ ನಿರೀಕ್ಷಿತ ೨೧೮ ಮೀ.ಮೀ. ಮಳೆಯ ಪೈಕಿ ಕೇವಲ ೧೯೨ ಮಿ.ಮೀ. ಮಳೆಯಷ್ಟೇ ದಾಖಲಾಗಿದ್ದು, ಹಲವು ಹೋಬಳಿಗಳಲ್ಲಿ ಮಳೆ ಕೊರತೆ ಗಂಭೀರವಾಗಿದೆ. ಪರಿಣಾಮವಾಗಿ ಮುಂಗಾರು ಬಿತ್ತನೆ ನಿರೀಕ್ಷಿತ ಮಟ್ಟ ತಲುಪದೆ ಶೇ. ೪೩ರಷ್ಟು ಮಾತ್ರ ಪೂರ್ಣಗೊಂಡಿದೆ.

ಕೃಷಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಆಳಂದ ಹೋಬಳಿಯಲ್ಲಿ ೧೪೯ ಮೀ.ಮೀ. ಮಳೆಯ ನಿರೀಕ್ಷೆಯಿದ್ದರೆ ಕೇವಲ ೮೭ ಮೀ.ಮೀ. ಮಳೆಯಾಗಿ ಶೇ. ೪೨ರಷ್ಟು ಕೊರತೆ ದಾಖಲಾಗಿದೆ. ಖಜೂರಿ ಹೋಬಳಿಯಲ್ಲಿ ೧೫೦ ಮಿ.ಮೀ. ಪೈಕಿ ೯೦ ಮಿ.ಮೀ. ಮಳೆಯಾಗಿ ಶೇ. ೪೦ರಷ್ಟು ಕೊರತೆ ಕಂಡು ಬಂದಿದೆ.

ಮಾದನಹಿಪ್ಪರಗಾ ಹೋಬಳಿಯಲ್ಲಿ ೧೪೫ ಮೀ.ಮೀ. ಪೈಕಿ ೧೩೧ ಮೀ.ಮೀ. ಮಳೆಯಾಗಿ ಪರಿಸ್ಥಿತಿ ತುಸು ಸಮಾಧಾನಕರವಾಗಿದ್ದರೂ, ನರೋಣಾ ವಲಯದಲ್ಲಿ ೧೫೪ ಮಿ.ಮೀ. ನಿರೀಕ್ಷಿತ ಮಳೆಯ ಪೈಕಿ ಕೇವಲ ೨೫ ಮೀ.ಮೀ. ಮಳೆಯಾಗಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ನಿಂಬರಗಾ ಹೋಬಳಿಯಲ್ಲಿ ೧೫೦ ಮಿ.ಮೀ. ಪೈಕಿ ೬೬ ಮಿ.ಮೀ. ಮಳೆಯಷ್ಟೇ ದಾಖಲಾಗಿದೆ.

ತಾಲೂಕಿನಲ್ಲಿ ಒಟ್ಟು ೧,೪೨,೫೦೦ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ೬೨ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದು ಶೇ. ೪೩ರಷ್ಟು ಪ್ರಗತಿಗೆ ಸಮವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಬಿತ್ತನೆಯಾಗಿರುವ ತೊಗರಿ, ಹೆಸರು, ಉದ್ದು, ಸೋಯಾಬೀನ್, ಹತ್ತಿ ಸೇರಿದಂತೆ ಮಳೆ ಆಶ್ರಿತ ಬೆಳೆಗಳಿಗೆ ತುರ್ತಾಗಿ ಉತ್ತಮ ಮಳೆಯ ಅಗತ್ಯವಿದೆ. ಇನ್ನೂ ಒಂದು ವಾರ ಮಳೆಯಾಗದಿದ್ದರೆ ಬೆಳೆಗಳು ಒಣಗಿ ರೈತರಿಗೆ ಭಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಎಚ್ಚರಿಸಿದ್ದಾರೆ.

....ಕೋಟ್‌....

ತಾಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಕೆಲ ಭಾಗಗಳಲ್ಲಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬರುತ್ತಿದೆ.

ಕೃಷಿ ಇಲಾಖೆ, ಪರಿಸ್ಥಿತಿ ನಿರಂತರ ಅವಲೋಕಿಸುತ್ತಿದ್ದು, ರೈತರಿಗೆ ಬೆಳೆ ಸಂರಕ್ಷಣೆ ಕುರಿತು ಅಗತ್ಯ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ಮುಂದಿನ ಕೆಲ ದಿನಗಳಲ್ಲಿ ಉತ್ತಮ ಮಳೆಯಾದರೆ ಹೆಚ್ಚಿನ ಬೆಳೆಗಳನ್ನು ಉಳಿಸಿಕೊಳ್ಳಬಹುದು. ಮಳೆ ಕೊರತೆ ಮುಂದುವರಿದರೆ ಸರ್ಕಾರದ ಮಾರ್ಗಸೂಚಿಯಂತೆ ಬೆಳೆ ಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು.

-ತಿಪ್ಪೇಸ್ವಾಮಿ ವಿ., ಸಹಾಯಕ ಕೃಷಿ ನಿರ್ದೇಶಕ, ಆಳಂದ.

----

....ಕೋಟ್‌.....

ಮುಂಗಾರು ಆರಂಭವಾದಾಗ ಉತ್ತಮ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಈಗ ಮಳೆ ಕೈಕೊಟ್ಟಿರುವುದರಿಂದ ಬೆಳೆ ಒಣಗುವ ಹಂತಕ್ಕೆ ಬಂದಿದೆ. ಸರ್ಕಾರ ತಕ್ಷಣ ಬರ ಘೋಷಿಸಿ, ಬೆಳೆ ವಿಮೆ ಹಾಗೂ ಪರಿಹಾರ ಬಿಡುಗಡೆ ಮಾಡಿದರೆ ಮಾತ್ರ ರೈತರಿಗೆ ಸ್ವಲ್ಪ ನೆಮ್ಮದಿ ಸಿಗಲಿದೆ. -ಶ್ರೀಶೈಲ ಪಾಟೀಲ, ರೈತ, ಆಳಂದ

ಫೋಟೊ

ಮಳೆ ಕೊರತೆಯಿಂದಾಗಿ ಬರಗಾಲ ಆವರಿಸಿರುವ ಆಳಂದದಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಳಂದ ತಾಲೂಕಿನ ಕೃಷಿ ಚಟುವಟಿಕೆ ತೀವ್ರ ಕುಸಿದಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾತಂಗಿ ಕಥನ ಈಗಿನ ತಲೆಮಾರಿಗೆ ಅನನ್ಯ ಸಾಂಸ್ಕೃತಿಕ ಪಠ್ಯ
ಹೊನ್ನಾಳಿ, ನ್ಯಾಮತಿ ತಾಲೂಕು ಬರಪೀಡಿತ ಎಂದು ಘೋಷಿಸಿ