ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ₹4 ಲಕ್ಷ 68 ಸಾವಿರ ಕೋಟಿ ರಾಜ್ಯದ ಬಜೆಟ್ ಇದ್ದು, ಅದರಲ್ಲಿ ಕಂದಾಯ ಇಲಾಖೆ ವೆಚ್ಚವು 3 ಲಕ್ಷ 38 ಸಾವಿರ ಕೋಟಿಯಿದೆ. ಅದರಲ್ಲಿ ಶೇ.10ರಷ್ಟು ರೈತರಿಗಾಗಿ ವಿನಿಯೋಗಿಸಿದರೆ ₹33 ಸಾವಿರ ಕೋಟಿ ಉಳಿಸಬಹುದು. ಈ ಹಣದಲ್ಲಿ 52 ಲಕ್ಷ ಚಿಕ್ಕ ಹಿಡುವಳಿದಾರ ರೈತರು ಸೇರಿ ಒಟ್ಟು 84 ಲಕ್ಷ ರೈತರ ಸಾಲಮನ್ನಾ ಮಾಡಬಹುದು. ಪ್ರತಿ ರೈತನಿಗೆ ₹50 ಸಾವಿರ ಸಾಲಮನ್ನಾ ಮಾಡಿದರೆ ಒಟ್ಟು ₹40 ಸಾವಿರ ಕೋಟಿ ಹಣದಲ್ಲಿ ಎಲ್ಲವೂ ಮುಗಿಯುತ್ತದೆ ಎಂದು ಹೇಳಿದರು.
ಸಂಪೂರ್ಣ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕಳೆದ 16 ದಿನಗಳಿಂದ ಬಿಜೆಪಿ ರೈತಮೋರ್ಚಾ ನೇತೃತ್ವದಲ್ಲಿ ಹೋರಾಟ ನಡೆಸಲಾಗುತ್ತಿದೆ. ಆದರೆ ಬರದ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನಮ್ಮ ಹಾಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ ಹಂತಹಂತವಾಗಿ ತಾಲೂಕುಗಳನ್ನು ಘೋಷಿಸುತ್ತಿದೆ ಎಂದರು.ಎಲ್ಲದಕ್ಕೂ ಕೇಂದ್ರದೆಡೆಗೆ ಬೆರಳು ತೋರಿಸುವ ಬದಲು ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆ ಮಾಡಿ, ಬಳಿಕ ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರಕ್ಕೆ ನಿಯೋಗ ಹೋದರೆ ನಾವೆಲ್ಲ ಅವರಿಗೆ ಸಹಕಾರ ಕೊಡುತ್ತೇವೆ. ಇಡೀ ಜಿಲ್ಲೆಯನ್ನು ತೀವ್ರ ಬರಗಾಲ ಎಂದು ಘೋಷಿಸಬೇಕು, ರೈತರ ಸಾಲಮನ್ನಾ ಮಾಡಬೇಕು ಹಾಗೂ ವಿಮೆ ಹಣವನ್ನು ರೈತರಿಗೆ ಕೊಡಿಸಬೇಕು. ಈ ಮೂರು ನಿರ್ಧಾರಗಳನ್ನು ಅಧಿವೇಶನ ಮುಗಿಯುವುದರೊಳಗಾಗಿ ಸರ್ಕಾರ ಮಾಡದಿದ್ದರೆ ಜಿಲ್ಲೆಯ ರೈತರೊಂದಿಗೆ ಸೇರಿ ಹೋರಾಟಕ್ಕೆ ತಯಾರಿದ್ದೇವೆ. ಬರಗಾಲದ ಹಿನ್ನೆಲೆ ದುಂದುವೆಚ್ಚ ಕಡಿಮೆ ಮಾಡಬೇಕು, ರಾಜ್ಯದ ಸಿಎಂ, ಸಚಿವರಿಗೆ ಸರ್ಕಾರಿ ಕಾರು, ಸರ್ಕಾರಿ ವೆಚ್ಚ ಯಾಕೆ ಬೇಕು?. ಅವರೆಲ್ಲ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡಿ, ಖರ್ಚು ಕಡಿಮೆ ಮಾಡಿದರೆ ಅದೇ ಖರ್ಚಿನಲ್ಲೇ ರೈತರಿಗೆ ಸಹಾಯ ಮಾಡಬಹುದು ಎಂದರು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಂಪೂರ್ಣ ಜಿಲ್ಲೆಯೇ ಬರದಿಂದ ಕೂಡಿರುವುದರಿಂದ ರಾಜ್ಯ ಸರ್ಕಾರ ತಕ್ಷಣ ರೈತರಿಗೆ ಸ್ಪಂದಿಸಬೇಕು. ಬರದ ಕುರಿತು ಸರ್ಕಾರ ಮಾಡುತ್ತಿರುವ ವೈಜ್ಞಾನಿಕ ಪರೀಕ್ಷೆ ನಿಲ್ಲಿಸಿ, ಇಡಿ ಜಿಲ್ಲೆಯನ್ನೇ ಬರಪೀಡಿತ ಎಂದು ಘೋಷಿಸಬೇಕು. ಒಣಗಿದ ಬೆಳಗಳನ್ನು ಬಿಟ್ಟು, ಸ್ವಲ್ಪ ಹಸಿರು ಕಂಡರೆ ಬರಗಾಲ ಇಲ್ಲವೆಂದು ಘೋಷಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.