ಕನ್ನಡಪ್ರಭ ವಾರ್ತೆ ಜಮಖಂಡಿ
3ನೇ ಬಾರಿಗೆ ನಡೆಯುತ್ತಿರುವ ಈ ಬೃಹತ್ ಧಾರ್ಮಿಕ ಉತ್ಸವ ಈ ಬಾರಿಯೂ ಮತ್ತೊಂದು ಐತಿಹಾಸಿಕ ಯಶಸ್ಸು ಗಳಿಸುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ, ಕೃಷ್ಣಾ ಉತ್ಸವ ಹಾಗೂ ಆರತಿ ಸಾನ್ನಿಧ್ಯವನ್ನು ನೊಣವಿನಕೇರಿಯ ವೀರಗಂಗಾಧರ ಅಜ್ಜಯ್ಯ, ಉತ್ತರ ಪ್ರದೇಶದ ದೇವಗಿರಿ ಬಾಬಾ, ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜೀ ಬೆನ್ನಾಳ ಮಹಾರಾಜರು, ನಿಡಸೋಸಿಯ ನಿಜಲಿಂಗೇಶ್ವರ ಶ್ರೀಗಳು ವಹಿಸಿಕೊಳ್ಳಲಿದ್ದಾರೆ.
ಆರ್‌ಎಸ್‌ಎಸ್ ಉತ್ತರ ಕರ್ನಾಟಕದ ಪ್ರಮುಖ ಅರವಿಂದರಾವ ದೇಶಪಾಂಡೆ, ಗಣಪತಿ ಹೆಗಡೆ, ರಾಘವೇಂದ್ರ ಕಾಗವಾಡ ಹಾಗೂ ಹಿಂದೂ ಜಾಗರಣಾ ವೇದಿಕೆ ಜಗದೀಶ ಕಾರಂತ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹಾಗೂ ಸಾವಯವ ಕೃಷಿ ಹಾಗೂ ಗೋರಕ್ಷಣೆಯಲ್ಲಿ ತೊಡಗಿಕೊಂಡ ಇಬ್ಬರು ಪ್ರಮುಖರು ವೇದಿಕೆ ಮೇಲೆ ಉಪಸ್ಥಿತರಿರಲಿದ್ದಾರೆ.ಸಾಯಂಕಾಲ 3.30ಕ್ಕೆ ಕೃಷ್ಣಾ ಉತ್ಸವಕ್ಕೆ ಶೋಭಾಯಾತ್ರೆ ಮೂಲಕ ಚಾಲನೆ ದೊರೆಯಲಿದ್ದು, ಸಂಜೆ 7 ಗಂಟೆಗೆ ಭವ್ಯಆರತಿ ನೆರವೇರಲಿದೆ, ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣದ ಕೃಷ್ಣಾ ನದಿ ತೀರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು ಕಾರ್ಯಕ್ರಮಕ್ಕಾಗಿ ಶ್ರೀಶೈಲ ದೇವಸ್ಥಾನದ ಪುರೊಹಿತರೊಂದಿಗೆ ಧರ್ಮರಥ ಆಗಮಿಸಿದ್ದು, ಕೃಷ್ಣಾ ಆರತಿ ಮಾಡಲು ಕಾಶಿಯ ಪಂಡಿತರು ಈಗಾಗಲೇ ಬಂದಿದ್ದಾರೆ, ನದಿಯಲ್ಲಿ ಪೂಜೆ ಹಾಗೂ ಆರತಿ ಮಾಡುವದಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಬೋಟ್‌ಗಳನ್ನು ತರಿಸಲಾಗುವುದು, ಹಿಪ್ಪರಗಿ ಜಲಾಶಯ ಹಾಗೂ ಮಠದ ಆವರಣ ಅಲಂಕೃತ ವಿದ್ಯುತ ದೀಪಗಳಿಂದ ಜನಮನ ಸೆಳೆಯುತ್ತಿದೆ. ವಾದ್ಯಮೇಳಗಳು, ಕಲಾತಂಡಗಳು ಆಗಮಿಸಲಿದ್ದು, ಬೃಹತ್ ಶಾಮಿಯಾನ, ಭೋಜನ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.