ಕನ್ನಡಪ್ರಭ ವಾರ್ತೆ ಇಳಕಲ್ಲ12ನೇ ಶತಮಾನದಲ್ಲಿ ಅಪ್ಪ ಬಸವಣ್ಣ, ಅಕ್ಕ ಮಹಾದೇವಿ ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳು ಇಂದಿಗೂ ಸಮಾಜ ಸುಧಾರಣೆಗೆ ಮಾರ್ಗದರ್ಶಕವಾಗಿವೆ ಎಂದು ಮೈಸೂರಿನ ಪೊಲೀಸ್‌ ತರಬೇತಿ ಕೇಂದ್ರದ ಮುಖ್ಯಸ್ಥ ಚನ್ನಬಸವಣ್ಣ ಲಂಗೋಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

12ನೇ ಶತಮಾನದಲ್ಲಿ ಅಪ್ಪ ಬಸವಣ್ಣ, ಅಕ್ಕ ಮಹಾದೇವಿ ಸೇರಿದಂತೆ ಅನೇಕ ಶರಣರು ರಚಿಸಿದ ವಚನಗಳು ಇಂದಿಗೂ ಸಮಾಜ ಸುಧಾರಣೆಗೆ ಮಾರ್ಗದರ್ಶಕವಾಗಿವೆ ಎಂದು ಮೈಸೂರಿನ ಪೊಲೀಸ್‌ ತರಬೇತಿ ಕೇಂದ್ರದ ಮುಖ್ಯಸ್ಥ ಚನ್ನಬಸವಣ್ಣ ಲಂಗೋಟಿ ಹೇಳಿದರು.ನಗರದ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಲಿಂಗವಂತ ಧರ್ಮಗ್ರಂಥ ಬಹುಮಾನ ವಿತರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಅಪ್ಪ ಬಸವಣ್ಣನವರ ವಚನಗಳು, ತತ್ವಗಳು ಹಾಗೂ ಅವುಗಳಲ್ಲಿರುವ ಸಾಮಾಜಿಕ ಸಂದೇಶಗಳನ್ನು 21ನೇ ಶತಮಾನದಲ್ಲಿ ಜಗತ್ತಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಲಿಂ.ಡಾ.ಮಹಾಂತಪ್ಪನವರು ಮಾಡಿದ್ದಾರೆ ಎಂದರು.

ಬಸವಣ್ಣನವರ ಸಂದೇಶಗಳನ್ನೇ ಜೀವನದ ಉಸಿರಾಗಿಸಿಕೊಂಡು ಕಾರ್ಯನಿರ್ವಹಿಸಿದ ಲಿಂ.ಡಾ.ಮಹಾಂತಪ್ಪನವರ ಆಶಯಗಳನ್ನು ಮುಂದುವರಿಸುವಲ್ಲಿ ವಿಜಯ ಮಹಾಂತೇಶ್ವರ ಶ್ರೀಮಠ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ತಮ್ಮ ಬಾಲ್ಯದ ದಿನಗಳನ್ನು ತಂದೆ ಸಿದ್ದಣ್ಣ ಲಂಗೋಟಿ ಅವರೊಂದಿಗೆ ಇದೇ ಶ್ರೀಮಠದಲ್ಲಿ ಕಳೆದಿರುವುದನ್ನು ಸ್ಮರಿಸಿದ ಅವರು, ಶ್ರೀಮಠದಲ್ಲಿ ಸೇವೆ ಸಲ್ಲಿಸುತ್ತಲೇ ತಾವು ಉನ್ನತ ಸ್ಥಾನಕ್ಕೇರಿದ್ದೇನೆ. ಅಪ್ಪ ಮಹಾಂತಪ್ಪನವರ ಆಶಯದಂತೆ ಅನೇಕ ಕೃತಿಗಳನ್ನು ರಚಿಸಲು ಶ್ರೀಮಠ ಹಾಗೂ ಪೂಜ್ಯ ಡಾ. ಗುರುಮಹಾಂತ ಶ್ರೀಗಳು ಪ್ರೇರಣೆಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಚನ್ನಬಸವಣ್ಣ ಲಂಗೋಟಿ ಅವರನ್ನು ಪೂಜ್ಯ ಡಾ.ಗುರುಮಹಾಂತ ಶ್ರೀಗಳು ಗೌರವಿಸಿ ಸತ್ಕರಿಸಿದರು.ಐದು ಕೃತಿಗಳಿಗೆ ಬಹುಮಾನ:

ಈ ವರ್ಷದ ಅತ್ಯುತ್ತಮ ಗ್ರಂಥಗಳಾಗಿ ಐದು ಕೃತಿಗಳನ್ನು ಆಯ್ಕೆ ಮಾಡಿ, ಅವುಗಳ ರಚನಾಕಾರರಿಗೆ ಶ್ರೀಮಠದ ವತಿಯಿಂದ ಬಹುಮಾನ ನೀಡಿ ಗೌರವಿಸಲಾಯಿತು.ತುಮಕೂರಿನ ಡಾ. ವಿಜಯಕುಮಾರ ಕಮ್ಮಾರ ಅವರ ‘ವಚನಗಳಲ್ಲಿ ವೈಜ್ಞಾನಿಕ ಚಿಂತನೆಗಳು’, ರಾಯಚೂರಿನ ಡಾ. ಸರ್ವಮಂಗಳಾ ಸಕ್ರಿ ಅವರ ‘ಬಯಲ ಬಿತ್ತಿಯಲ್ಲಿ ಶರಣರ ತತ್ವಶೋಧ’, ಹಾವೇರಿಯ ಡಾ. ಪುಷ್ಪವತಿ ಶಲವಡಿಮಠ ಅವರ ‘ತನುಭಾವ ದೀಪ್ತಿ’, ಹುಬ್ಬಳ್ಳಿಯ ಅನುಪಮಾ ಪಾಟೀಲ ಅವರ ‘ಬಸವಾದಿ ಶರಣರ ಜೀವನ ಮೌಲ್ಯಗಳು’ ಹಾಗೂ ಮೈಸೂರಿನ ಪ್ರೊ. ಮೂರಬದ ಮಲ್ಲಿಕಾರ್ಜುನ ಅವರ ‘ಬಸವ ಬೆರಗು’ ಕೃತಿಗಳಿಗೆ ಬಹುಮಾನ ನೀಡಲಾಯಿತು.ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಡಾ.ಗುರುಮಹಾಂತ ಶ್ರೀಗಳು ವಹಿಸಿದ್ದರು. ಬೆಲ್ದಾಳ ಶರಣರು, ಶಿರೂರಿನ ಡಾ. ಬಸವಲಿಂಗ ಶ್ರೀಗಳು, ಸಿದ್ದಣ್ಣ ಲಂಗೋಟಿ, ಅಶೋಕ ಬಿಜ್ಜಲ, ಮಲ್ಲು ಮಡಿವಾಳರ, ಚಂದ್ರಶೇಖರ ಶಿವಬಲ್ಲ, ಬಸವರಾಜ ಕರಬಸಪ್ಪನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಂಗಣ್ಣ ಗದ್ದಿ ಸ್ವಾಗತಿಸಿದರು. ಮಲ್ಲಯ್ಯ ಗಣಾಚಾರಿ ವಂದಿಸಿದರು. ಪ್ರವೀಣ ಮುದಗಲ್ಲ ಕಾರ್ಯಕ್ರಮ ನಿರೂಪಿಸಿದರು.