-ವಿವಿ ಸಾಗರದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಾದಯಾತ್ರೆ
------ಕನ್ನಡಪ್ರಭ ವಾರ್ತೆ ಹಿರಿಯೂರು
ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಳೆದ 42 ದಿನಗಳಿಂದ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಮುಂದುವರೆದ ಭಾಗವಾಗಿ ಜೆಜಿಹಳ್ಳಿ ಹೋಬಳಿಯಿಂದ ತಾಲೂಕು ಕಚೇರಿಯವರೆಗೆ ಸಾವಿರಾರು ರೈತರು ನೂರಾರು ಟ್ರ್ಯಾಕ್ಟರ್, ಆಟೋ, ಕಾರು, ಬೈಕ್ ಗಳೊಂದಿಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು.ಈ ವೇಳೆ ಪ್ರತಿಭಟನಾ ನಿರತ ಪಾದಯಾತ್ರಿ ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾತನಾಡಿ, ಮದ್ಯ ಸರಬರಾಜು ಮಾಡಿ ಎಂದು ಕೇಳುತ್ತಿಲ್ಲ, ಕುಡಿವ ನೀರು ಪೂರೈಕೆ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಈಗಾಗಲೇ ಜೆಜಿ ಹಳ್ಳಿ ಹೋಬಳಿಯ ಭಾಗದಲ್ಲಿ ಬೋರ್ ವೆಲ್ ಗಳು ಸಂಪೂರ್ಣ ಬತ್ತಿ ಹೋಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಎತ್ತಿನಹೊಳೆ ಯೋಜನೆ ಮೂಲಕ ಗಾಯಿತ್ರಿ ಡ್ಯಾಂ ಸೇರಿದಂತೆ ಹೋಬಳಿಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದಲ್ಲಿ ರೈತರು ನೆಮ್ಮದಿಯಿಂದ ಬದುಕಲು ಅನುಕೂಲವಾಗುತ್ತದೆ. ಈಗಾಗಲೇ ರೈತರ ಬದುಕು ಮೂರಾಬಟ್ಟೆ ಆಗಿದ್ದು ಅತಿವೃಷ್ಟಿ, ಅನಾವೃಷ್ಟಿಗಳಾದಾಗ ಸರ್ಕಾರದಿಂದ ನ್ಯಾಯವಾದ ಪರಿಹಾರಗಳು ಸಿಗುತ್ತಿಲ್ಲ. ಬೆಳೆಗಳಿಗೆ ನ್ಯಾಯಯುತ ಬೆಲೆಗಳು ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಘೋಷಿಸಿದ್ದ ಭದ್ರಾ ಯೋಜನೆ 5300 ಕೋಟಿ ಹಣ ಮೀಸಲಾಗಿಯೇ ಉಳಿದಿದೆ. ಭದ್ರಾ ಕಾಮಗಾರಿ ಸಂಪೂರ್ಣವಾಗದೇ ಇರುವುದರಿಂದ 46 ಸಾವಿರ ಕ್ಯೂಸೆಕ್ ನೀರು ಹೊಳೆಗೆ ಹರಿದು ಹೋಗುತ್ತಿದೆ. ಮೀಸಲಿಟ್ಟ ಹಣ ಬಂದು ಕಾಮಗಾರಿ ಪೂರ್ಣವಾಗಿದ್ದರೆ ಆ ನೀರು ವಿವಿ ಸಾಗರದ ಒಡಲನ್ನಾದರೂ ಸೇರುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಈ ಕೂಡಲೇ ಅಧಿಕಾರಿಗಳ ಸಭೆ ಕರೆದು ಜೆಜಿ ಹಳ್ಳಿ ಹೋಬಳಿಯ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ಇಲ್ಲವಾದಲ್ಲಿ ಈಗಾಗಲೇ ಎರಡು ಹಂತದ ಹೋರಾಟ ಮುಗಿದಿದ್ದು, ಮೂರನೇ ಹಂತದ ಚಳುವಳಿಗೆ ಸನ್ನದ್ಧರಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಕಲುವಳ್ಳಿ ಭಾಗದ ಜನರು ಗಟ್ಟಿ ಜನವಾದ್ದರಿಂದ ನೀರು ಇಲ್ಲದೆ ಸೊರಗಿ ಸಾಲಗಾರರಾದರೂ ಸಹ ನೀರಿಗಾಗಿ ಇನ್ನೂ ಹೋರಾಟ ನಡೆಸುತ್ತಿದ್ದಾರೆ. ಆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿವ ನೀರು, ಬೆಳೆಗಳಿಗೆ ನೀರು ಇಲ್ಲದೆ ಟ್ಯಾಂಕರ್ ಗಳ ಮೂಲಕ ನೀರು ಹರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಹಾಗೂ ವಿವಿ ಸಾಗರಕ್ಕೆ 10 ಟಿಎಂಸಿ ನೀರು ಮೀಸಲಿಡಬೇಕು ಎಂದು ಆಗ್ರಹಿಸಿದರು.ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ ಯಶೋಧರ್ ಮಾತನಾಡಿ, ತಾಲೂಕು ಸದಾ ಬರಗಾಲಕ್ಕೆ ತುತ್ತಾಗುತ್ತಲೇ ಇದೆ. ರೈತರ ಕಣ್ಣೀರು ಒರೆಸುವ ತುಡಿತವಿಲ್ಲದ ಜನಪ್ರತಿನಿಧಿನಗಳನ್ನು ಕಾಣುತ್ತಿದ್ದೇವೆ. ಕಳ್ಳ ದಾರಿಯಲ್ಲಿ ನೀರು ಎಲ್ಲೆಲ್ಲಿಗೋ ಹೋಗುತ್ತಿದ್ದು, ಇಲ್ಲಿನವರಿಗೇ ನೀರು ಸಿಗುತ್ತಿಲ್ಲ ಎಂದರೆ ಏನರ್ಥ ರಾಜಕೀಯ ಒತ್ತಟ್ಟಿಗಿರಲಿ. ಮೊದಲು ಆ ಭಾಗದ ಜನರ ಕುಡಿವ ನೀರಿನ ಬವಣೆ ನೀಗಿಸಿ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿಯವರು ಮನವಿ ಸ್ವೀಕರಿಸಿ ರೈತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ಜಿಪಂ ಮಾಜಿ ಸದಸ್ಯ ಸಿಬಿ ಪಾಪಣ್ಣ, ಜೀವದಾತೆ ಫೌಂಡೇಶನ್ ಸಂಸ್ಥಾಪಕ ಅಭಿನಂದನ್, ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಸೀದ್ದವೀರಪ್ಪ, ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ಅಲ್ತಾಫ್, ಸುರೇಶ್, ಎಸ್.ಟಿ. ಮಂಜುನಾಥ್, ರೈತ ಮುಖಂಡರಾದ ಶಿವಕುಮಾರ್, ಹೆಚ್.ಆರ್. ತಿಮ್ಮಯ್ಯ, ಈರಣ್ಣ, ಜಯರಾಮಯ್ಯ, ಶೇಷಣ್ಣ, ತಿಮ್ಮಣ್ಣ, ಈಶ್ವರಪ್ಪ ಸೇರಿದಂತೆ ಸಾವಿರಾರು ರೈತರು ಹಾಜರಿದ್ದರು.
-----ಫೋಟೋ:
ಚಿತ್ರ 1 ಜವನಗೊಂಡನಹಳ್ಳಿ ಹೋಬಳಿಯ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಾದಯಾತ್ರೆ ನಡೆಸಲಾಯಿತು.------
ಚಿತ್ರ 2 ಧರಣಿ ನಿರತ ರೈತರನ್ನು ಉದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾತನಾಡಿದರು.