ಹಾನಗಲ್ಲ: ತಾಲೂಕಿನ ಕೂಡಲ ಮತ್ತು ನಾಗನೂರು ಮಧ್ಯೆ ವರದಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮತ್ತು ಶಾಸಕ ಶ್ರೀನಿವಾಸ ಮಾನೆ ವೀಕ್ಷಿಸಿ, ಕಾಮಗಾರಿ ವಿಳಂಬಕ್ಕೆ ಕೆಆರ್‌ಡಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಶಿರಶ್ಯಾಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಬಾಳಂಬೀಡ ಗ್ರಾಮದಲ್ಲಿ ವರದಾ ನದಿ ಹಿನ್ನೀರು ನುಗ್ಗುತ್ತಿರುವ ಕೃಷಿ ಭೂಮಿಯನ್ನು ಸಚಿವ ಶಿವಾನಂದ ಪಾಟೀಲ, ಶಾಸಕ ಶ್ರೀನಿವಾಸ ಮಾನೆ ವೀಕ್ಷಣೆ ಮಾಡಿದರು. ವರದಾ ನದಿ ಹಿನ್ನೀರಿನಿಂದ ೭೭ ಹೆಕ್ಟೇರ್ ಕೃಷಿಭೂಮಿಗೆ ನೀರು ನುಗ್ಗುತ್ತಿದೆ. ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿ ಈ ಸಮಸ್ಯೆ ಮಾಮೂಲಾಗಿದೆ. ಇದರಿಂದ ರೈತರು ಸಾಕಷ್ಟು ಹಾನಿ ಅನುಭವಿಸುವಂತಾಗಿದೆ ಎಂದು ರೈತರು ಗಮನ ಸೆಳೆದಾಗ, ವರದಾ ನದಿಗೆ ತಡೆಗೋಡೆ ನಿರ್ಮಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಹ್ಲಾದ್ ಶೆಟ್ಟಿ ಅವರಿಗೆ ಸೂಚಿಸಿದರು.
ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ತಹಸೀಲ್ದಾರ್ ರೇಣುಕಾ ಎಸ್., ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠ, ಟಾಕನಗೌಡ ಪಾಟೀಲ, ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ ಇದ್ದರು.