ಕನ್ನಡಪ್ರಭ ವಾರ್ತೆ ಹೊನ್ನಾಳಿ
ನದಿ ಪ್ರವಾಹಕ್ಕೆ ತುತ್ತಾಗುವ ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಿಗೆ ಭೇಟಿ ನೀಡಿ, ಪರಿಶೀಲಿಸಿ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಸಿಬ್ಬಂದಿಗೆ ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.ಬುಧವಾರ ಅವರು ತುಂಗಭದ್ರಾ ನದಿ ಪ್ರವಾಹ ಭೀತಿಯಲ್ಲಿರುವ ಸಾಸ್ವೆಹಳ್ಳಿ ಹೋಬಳಿಯ ಹಳೆ ಐನೂರು ಮತ್ತು ಸಾಸ್ವೆಹಳ್ಳಿ ಗ್ರಾಮದ ವ್ಯಾಪ್ತಿಯ ದಾಸರ ಬೀದಿ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯ ಜನಗಳ ಸಮಸ್ಯೆ ಆಲಿಸಿ ಅವರು ಮಾತನಾಡಿದರು.
ತಾಲೂಕಿನ ಸಾಸ್ವೆಹಳ್ಳಿಯ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ. ನದಿಯ ನೀರಿನ ಮಟ್ಟ ಮತ್ತಷ್ಟು ಹೆಚ್ಚಾದಲ್ಲಿ ಇಲ್ಲಿನ ಆರು ಮನೆಗಳ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಸಂತ್ರಸ್ತರ ಜಾನುವಾರುಗಳು ಅಥವಾ ಇನ್ಯಾವುದೇ ಸಾಕು ಪ್ರಾಣಿಗಳಿದ್ದಲ್ಲಿ ಅವುಗಳನ್ನು ಹತ್ತಿರದ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.ಇಲಾಖೆ ಸಿಬ್ಬಂದಿ ಸ್ಥಳೀಯ ಗ್ರಾಪಂ ಮತ್ತು ಪೊಲೀಸ್ ಇಲಾಖೆ ನೆರವಿನೊಂದಿಗೆ ಅಹೋರಾತ್ರಿ ಕಾರ್ಯೋನ್ಮುಖರಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ತುಂಗಾ ಮತ್ತು ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡಲಾಗಿದ್ದು, ತುಂಗಾಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನದಿ ಪಾತ್ರದ ಗ್ರಾಮದ ಜನರು ಮೀನು ಬೇಟೆ, ಸ್ನಾನ, ಜಾನುವಾರು ಮೈ ತೊಳೆಯುವುದು ಇತ್ಯಾದಿ ನೆಪ ಹೇಳಿಕೊಂಡು ನೀರಿಗೆ ಇಳಿಯುವ ಪ್ರಯತ್ನ ಮಾಡದಿರಿ ಎಂದು ಮನವಿ ಮಾಡಿದರು.ಜೊತೆಯಲ್ಲಿ ಜಿಪಂ ಸಿಇಒ ಸುರೇಶ್ ಇಟ್ನಾಳ್, ಹೊನ್ನಾಳಿ ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ರಾಘವೇಂದ್ರ, ಉಪ ತಹಸೀಲ್ದಾರ್ ಚಂದ್ರಪ್ಪ, ರಾಜಸ್ವ ನಿರೀಕ್ಷಕ ದಿನೇಶ್ ಬಾಬು, ಸ್ಥಳೀಯ ಗ್ರಾಪಂ ಅಧ್ಯಕ್ಷ ಜಬ್ಬಾರ್ ಅಲಿ ಖಾನ್, ಪಿಡಿಒ ಹನುಮಂತ ನಾಯ್ಕ, ಪೊಲೀಸ್ ಇಲಾಖೆ, ಗ್ರಾಪಂ ಸಿಬ್ಬಂದಿ ಜೊತೆಯಲ್ಲಿದ್ದರು.
- - --31ಎಚ್.ಎಲ್.ಐ3: