ಬಿಡುವು ನೀಡಿ ಸುರಿದ ಮಳೆ: ಹಲವೆಡೆ ಪ್ರವಾಹ ಯಥಾಸ್ಥಿತಿ

KannadaprabhaNewsNetwork | Published : Aug 1, 2024 12:33 AM

ಸಾರಾಂಶ

ಕೊಡಗು ಜಿಲ್ಲೆಯಾದ್ಯಂತ ಬುಧವಾರ ಮಧ್ಯಾಹ್ನ ವರೆಗೆ ಮಳೆ ಬಿಡುವು ನೀಡಿ, ನಂತರ ಸುರಿಯಿತು. ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಮತ್ತೆ ಮುಂದುವರಿಕೆಯಾಗಿದೆ. ಮಳೆ ಕೊಂಚ ಬಿಡುವು ಕೊಟ್ಟು ಸುರಿದ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಪ್ರವಾಹ ಇಳಿಮುಖವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮತ್ತೆ ಮಳೆಯಾದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮತ್ತೆ ಪ್ರವಾಹ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಾದ್ಯಂತ ಬುಧವಾರ ಮಧ್ಯಾಹ್ನ ವರೆಗೆ ಮಳೆ ಬಿಡುವು ನೀಡಿ, ನಂತರ ಸುರಿಯಿತು. ಪ್ರವಾಹ ಪರಿಸ್ಥಿತಿ ಜಿಲ್ಲೆಯಲ್ಲಿ ಮತ್ತೆ ಮುಂದುವರಿಕೆಯಾಗಿದೆ.

ಮಳೆ ಕೊಂಚ ಬಿಡುವು ಕೊಟ್ಟು ಸುರಿದ ಹಿನ್ನೆಲೆಯಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಪ್ರವಾಹ ಇಳಿಮುಖವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮತ್ತೆ ಮಳೆಯಾದ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮತ್ತೆ ಪ್ರವಾಹ ಉಂಟಾಗಿದೆ. ಕಾವೇರಿ ನದಿ ನೀರಿನ ಹರಿವು ಹೆಚ್ಚಳ ಇದ್ದ ಹಿನ್ನೆಲೆಯಲ್ಲಿ ಚೆರಿಯಪರಂಬು, ಕುಶಾಲನಗರ ಸಾಯಿ ಬಡಾವಣೆ, ಕರಡಿಗೋಡು ಮತ್ತಿತರ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿತ್ತು.

ಕೊಡಗಿನಲ್ಲಿ ಮಳೆ ಹಾನಿ ಪರಿಶೀಲಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಕಂದಾಯ ಸಚಿವ ಕೃಷ್ಣೆಬೈರೆಗೌಡ ಆಗಮಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಿಂದ ಸಂಭವಿಸಿದ ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.

ಕಾವೇರಿ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಮುಂದುವರಿದಿದೆ. ಮೂರ್ನಾಡು ಸಮೀಪದ ಬಲಮುರಿ ಗ್ರಾಮವನ್ನು ಪ್ರವಾಹ ನೀರು ಸುತ್ತುವರಿದೆ. ಗ್ರಾಮಕ್ಕೆ ಸಂಪರ್ಕಿಸುವ ಮೂರ್ನಾಡು ಬಲಮುರಿ ರಸ್ತೆ ಸ್ತಬ್ಧಗೊಂಡಿದೆ. ಇಲ್ಲಿ ರಸ್ತೆ ಮೇಲೆ ನಾಲ್ಕು ಅಡಿ ನೀರು ಹರಿಯುತ್ತಿದೆ. 2018 ಮತ್ತು 19 ರಲ್ಲೂ ಇದಕ್ಕಿಂತ ಹೆಚ್ಚಿನ ಅಪಾಯ ಬಲಮುರಿ ಗ್ರಾಮ ಎದುರಿಸಿತ್ತು. ಈಗಲೂ ಕ್ಷಣ ಕ್ಷಣಕ್ಕೂ ಪ್ರವಾಹ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.

ನಾಪೋಕ್ಲಿನ ಚೆರಿಯಬರುಂಬು ಗ್ರಾಮ ಬಹುತೇಕ ಜಲಾವೃತಗೊಂಡಿದೆ. ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ನಾಲ್ಕೈದು ಅಡಿ ನೀರು ಗ್ರಾಮಕ್ಕೆ ನುಗ್ಗಿದೆ. ಗ್ರಾಮದಲ್ಲಿರುವ ತಿಮ್ಮಯ್ಯ ಕ್ರೀಡಾಂಗಣ ಸಂಪೂರ್ಣ ಜಲಾವೃತಗೊಂಡಿದೆ. ಪ್ರವಾಹ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿನ ವಸ್ತುಗಳನ್ನು ಜನರು ತೆರವು ಮಾಡುತ್ತಿದ್ದಾರೆ.

ಇಲ್ಲಿನ 8 ಕುಟುಂಬಗಳನ್ನು ಅಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ಈ ನಡುವೆ ಪ್ರವಾಹದಲ್ಲಿ ಸಿಲುಕಿದ್ದ ನಾಯಿ ಮರಿಯನ್ನು ಸಿರಾಜ್ ಎಂಬ ಯುವಕ ರಕ್ಷಣೆ ಮಾಡಿದ್ದಾನೆ.

ಕುಶಾಲನಗರದ ಹಲವು ಬಡಾವಣೆಗಳಿಗೆ ಕಾವೇರಿ ನೀರು ನುಗ್ಗಿದೆ. ಕುಶಾಲನಗರದ ಗಂಧದ ಕೋಟಿ ಬಳಿ ಹಲವು ಮನೆಗಳು ಜಲಾವೃತಗೊಂಡಿದೆ. ಕಾವೇರಿ ಪ್ರತಾಪಕ್ಕೆ ಹಲವು ವಾಸದ ಮನೆ ಸ್ಪಾ, ನರ್ಸರಿ ಎಲ್ಲವೂ ಜಲಾವೃತಗೊಂಡಿದೆ. ಸ್ಪಾಗೆ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ನರ್ಸರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಿಡಗಳು ನಷ್ಟಗೊಂಡಿದೆ. ಗಿಡಗಳು ನೀರಿನಲ್ಲಿ ಮುಳುಗಿದೆ.

ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ದುಬಾರೆ ಜಲಾವೃತಗೊಂಡಿದೆ. ಕುಶಾಲನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದುಬಾರೆಯಲ್ಲಿ 10 ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳು ಜಲಾವೃತವಾಗಿದೆ. ಪ್ರವಾಸಿಗರಿಗಾಗಿ ಇದ್ದ ಶೌಚಾಲಯವೂ ಮುಳುಗಡೆಯಾಗಿದೆ. ಹೀಗಾಗಿ ದುಬಾರೆ ಸಾಕಾನೆ ಶಿಬಿರ ಎರಡು ದಿನ ಅರಣ್ಯ ಇಲಾಖೆಯಿಂದ ಬಂದ್ ಮಾಡಲಾಗಿದೆ.

ಪ್ರವಾಹದ ನೀರಿನಲ್ಲಿ ಸಿಲುಕಿ ನಾಯಿಯೊಂದು ಪರಿತಪಿಸಿದ ಘಟನೆ ಕುಶಾಲನಗರದ ಸಾಯಿ ಬಡಾವಣೆಯಲ್ಲಿ ನಡೆದಿದೆ.

ಕಾವೇರಿ ನದಿ ಭಾಗದಲ್ಲಿ ಮರಿ ಹಾಕಿಕೊಂಡಿದ್ದ ನಾಯಿ, ರಾತ್ರೋ ರಾತ್ರಿ ಪ್ರವಾಹದ ನೀರು ನುಗ್ಗಿದ್ದ ಹಿನ್ನೆಲೆ

ಮರಿಗಾಗಿ ನೀರಿನೊಳಗೆ ಹೋಗಿ ತನ್ನ ಮರಿಗಳಿಗಾಗಿ ಹುಡುಕಾಟ ನಡೆಸಿದ ದೃಶ್ಯ ನೋಡುಗರ ಮನ ಕಲುಕಿತು.

ದಕ್ಷಿಣ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಹೈಸೊಡ್ಲೂರು ಗ್ರಾಮದ ಪ್ರಕಾಶ್ ಎಂಬವರಿಗೆ ಸೇರಿದ ಹಸುವೊಂದು ಮೃತಪಟ್ಟಿದೆ.

Share this article