ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅನೇಕರಿಗೆ ಟೊಮೆಟೊ ಇಲ್ಲದೆ ಅಡುಗೆಯೇ ರುಚಿಸುವುದಿಲ್ಲ. ಸದ್ಯ ಉತ್ತಮ ಗುಣಮಟ್ಟದ ಟೊಮೇಟೊ ಬೆಲೆ ಒಂದು ಕೆಜಿಗೆ ರೂ70 ರಿಂದ ರೂ 90 ವರೆಗೆ ಮಾರಾಟವಾಗುತ್ತಿದೆ. ಟೊಮೇಟೊ ಹೊರತಾಗಿ ಎಲ್ಲ ಬಗೆಯ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ. ಕಳೆದ ವರ್ಷ ಟೊಮೇಟೊ ಬೆಲೆ ಸಾಕಷ್ಟು ಏರಿಕೆಯಾಗಿ ಟೊಮೆಟೊ ರೈತರು ಉತ್ತಮ ಆದಾಯ ಗಳಿಸಿದ್ದರು.
14 ಕೆಜಿ ಬಾಕ್ಸ್‌ಗೆ ₹600ದರ ಹೆಚ್ಚಾಗಿದ್ದಾಗ ಟೊಮೆಟೋ ಕಳ್ಳತನ ಪ್ರಕರಣಗಳೂ ನಡೆದಿದ್ದವು. ಮತ್ತೆ ಅಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಚಿಕ್ಕಬಳ್ಳಾಪುರ ಎಪಿಎಂಸಿಯಲ್ಲಿ ಟೊಮೆಟೊ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಒಂದು ವಾರದ ವರೆಗೂ 14 ಕೆಜಿ ತೂಕದ ಒಂದು ಬಾಕ್ಸ್ ಟೊಮೆಟೊ ಬೆಲೆ 1000 ದಿಂದ 1300ವರೆಗೂ ಗಡಿ ದಾಟಿತ್ತು. ಆದರೆ ಈ ವಾರ 14 ಕೆಜಿ ತೂಕದ ಒಂದು ಬಾಕ್ಸ್ ಬೆಲೆ 100 ರಿಂದ 300 ರೂಪಾಯಿಗೆ ಕುಸಿತಗೊಂಡಿದ್ದು ರೈತರಿಗೆ ಭಾರೀ ನಿರಾಸೆ ಉಂಟಾಗಿತ್ತು. ಇದೀಗ ಟೊಮೊಟೊ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದ್ದು, ಕನಿಷ್ಟ 200 ರೂ ಹಾಗೂ ಗರಿಷ್ಠ 600 ರೂಪಾಯಿ ವರೆಗೆ ಟೊಮೆಟೊ ಮಾರಾಟವಾಗುತ್ತಿದೆ.
ಅದೇ ರೀತಿ ಎರಡು ತಿಂಗಳು ರಾಜ್ಯಾದ್ಯಂತ ಸಾಕಷ್ಟು ಮಳೆ ಬಿದ್ದ ಪರಿಣಾಮ ತರಕಾರಿ ಬೆಳೆಗಳು ಹಾಳಾಗಿದ್ದು, ಹೆಚ್ಚಿನ ತರಕಾರಿ ಬೆಲೆ ಏರುಗತಿಯಲ್ಲೇ ಇದೆ. ಸದಾ ರೂ 20ರಿಂದ 30ರ ಆಸುಪಾಸಿನಲ್ಲಿರುತ್ತಿದ್ದ ಬೀಟ್‌ರೂಟ್ ದರ ಇದೀಗ 60 ರೂ.ಗೆ ಏರಿಕೆಯಾಗಿದೆ. ಕ್ಯಾರಟ್ ದರ ಎರಡು ತಿಂಗಳಿಂದ ಕೆ.ಜಿ.ಗೆ 100 ರೂ. ಇದೆ. ಹಾಗಲಕಾಯಿ 53 ರೂ., ಸೋರೆಕಾಯಿ 56 ರೂ. ಇದೆ. ಮೂಲಂಗಿ, ಬದನೆಕಾಯಿ ಮತ್ತಿತರ ತರಕಾರಿಗಳ ದರವೂ ಏರಿಕೆಯಾಗಿದೆ.