ಕನ್ನಡಪ್ರಭ ವಾರ್ತೆ ಹೊಳೆನರಸೀಪುರರೈತ ಹಾಗೂ ಕೂಲಿ ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರ ತ್ಯಾಗವನ್ನು ಗೌರವಿಸಬೇಕಿದೆ. ನಮ್ಮ ದೇಶದ ಸಂವಿಧಾನ ನೀಡಿದ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿಭಾಯಿಸುತ್ತಾ, ಯುವ ಜನತೆಯೂ ದೇಶದ ಏಳಿಗೆಗೆ ಶ್ರಮಿಸುವ ಜತೆಗೆ ನೀರು, ಪರಿಸರ ಹಾಗೂ ಭೂಮಿಯ ಸಂರಕ್ಷಣೆಗೆ ಆದ್ಯತೆ ನೀಡಿ, ಉತ್ತಮವಾದ ನಡೆ ರೂಪಿಸಿಕೊಂಡು ದೇಶದ ಯುವ ನಾಯಕರಾಗಿ ಬೆಳೆಯುವಂತೆ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಸಲಹೆ ನೀಡಿದರು. ಪಟ್ಟಣದ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ೭೯ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ಜನರ ತ್ಯಾಗ ಹಾಗೂ ಬಲಿದಾನದಿಂದ ದೊರೆತ ಸ್ವಾತಂತ್ರ್ಯ ದಿನದಂದು ವೀರ ಯೋಧರು ಹಾಗೂ ಮಹನೀಯರ ಸೇವೆಯನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಮೊಬೈಲನ್ನು ಶಿಕ್ಷಣ, ಜ್ಞಾನಾರ್ಜನೆ ಹಾಗೂ ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಮತ್ತು ಉನ್ನತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಸೇವೆ ಸಲ್ಲಿಸಬೇಕೆಂದು ಸಲಹೆ ನೀಡಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ಎನ್. ಮಂಜುರಾಜ್ ಮಾತನಾಡಿ, ಇಂದಿನ ಯುವ ಜನತೆ ಆಧುನಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಆಧುನಿಕ ಸಲಕರಣೆಗಳು ಸ್ವೆಚ್ಛೆಯನ್ನು ಶಿಫಾರಸ್ಸು ಮಾಡುತ್ತಿದೆಯೇ ಹೊರತು ಸ್ವತಂತ್ರ್ಯವನ್ನಲ್ಲ. ಆದ್ದರಿಂದ ಸ್ವಾತಂತ್ರ್ಯ ನಮಗೆ ನೀಡಿರುವ ಸ್ವಾತಂತ್ರ್ಯವನ್ನು ಅರ್ಥೈಸಿಕೊಂಡು, ಬದುಕನ್ನು ರೂಪಿಸಿಕೊಂಡು, ನಿರ್ಭಂದಗಳು, ಹಕ್ಕುಗಳು ಹಾಗೂ ಕರ್ತವ್ಯದ ಜವಾಬ್ದಾರಿಯನ್ನು ಅರಿತು ಬದುಕನ್ನು ರೂಪಿಸಿಕೊಂಡು, ಸ್ವಾತಂತ್ರ್ಯ ಭಾರತಕ್ಕೆ ಜವಾಬ್ದಾರಿಯುತ ಪ್ರಜೆಯಾಗಿ ನನ್ನ ಕೊಡುಗೆ ಏನು ಎಂಬುದನ್ನು ಆತ್ಮಾವಲೋಕನ ಮಾಡಿಕೊಂಡು ಸಾಗಬೇಕಿದೆ ಎಂದರು. ಪ್ರಗತಿಪರ ರೈತರಾದ ಪಾಪೇಗೌಡ, ನಿ. ಯೋಧರಾದ ರಮೇಶ್ ಹಾಗೂ ಚನ್ನಕೇಶವಯ್ಯ, ಪೌರ ಕಾರ್ಮಿಕ ಶಂಕರ್ ಎ. ಕ್ರೀಡೆಯಲ್ಲಿ ಸಾಧನೆಗೈದ ಪ್ರೀತಂ ಎಚ್.ಆರ್, ಶಿಕ್ಷಕ ಷಣ್ಮುಖಯ್ಯ, ಸಾಧನೆ ಗುರುತಿಸಿ, ಸನ್ಮಾನಿಸಿ, ಗೌರವಿಲಾಯಿತು. ಪಟ್ಟಣದ ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ ಅವರ ನೇತೃತ್ವದಲ್ಲಿ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು.