ವಿದ್ಯುತ್‌ ಕ್ಷೇತ್ರ ಖಾಸಗೀಕರಣಕ್ಕೆ ರೈತರ ವಿರೋಧ

KannadaprabhaNewsNetwork |  
Published : Apr 18, 2026, 01:30 AM IST
ಮಧುಗಿರಿಯಲ್ಲಿ ರೈತ ಸಂಘದಿಂದ ವಿದ್ಯುತ್ ನ್ನು ಖಾಸಗೀಕರಣ ಗೊಳಿಸ ಬಾರದು ,ಸ್ಮಾರ್ಟ್ ಮೀಟರಿ ಅಳಡಿಸಬಾರದು ಎಂದು ಸಂಘದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಬಾರದು ಹಾಗೂ ರೈತರ ಪಂಪ್ ಸೆಟ್ ಗಳಿಗೆ ಪ್ರಿಪೇಡ್‌ ಸ್ಮಾರ್ಟ್ ಮೀಟರ್ ಅಳವಡಿಕೆ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಬಾರದು ಹಾಗೂ ರೈತರ ಪಂಪ್ ಸೆಟ್ ಗಳಿಗೆ ಪ್ರಿಪೇಡ್‌ ಸ್ಮಾರ್ಟ್ ಮೀಟರ್ ಅಳವಡಿಕೆ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಟೌನ್‌ಹಾಲ್‌ನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ರೈತರು ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ. ಗೋವಿಂದರಾಜು, ನಮ್ಮ ತಾಲೂಕಿನಲ್ಲಿ ಶೇ.80ರಷ್ಟು ಜನ ಕೂಲಿಕಾರ್ಮಿಕರು ಜೀವನ ನಿರ್ವಹಣೆಗೆ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಮುಂಗಡ ಹಣ ತುಂಬಿ ವಿದ್ಯುತ್ ಪೆಡೆಯಲು ಸಾಧ್ಯವಾಗುತ್ತಿಲ್ಲ. ಜನರ ತೆರಿಗೆ ಹಣದಿಂದ ಸುಮಾರು 25ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡಿ ವಿದ್ಯುತ್ ಕ್ಷೇತ್ರ ಬಲ ಪಡಿಸಲಾಗಿದೆ. ಇದನ್ನು ಖಾಸಗೀಕರಣಗೊಳಿಸಲು ಮುಂದಾದರೆ ರೈತ ಸಂಘ ಉಗ್ರ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಸರ್ಕಾರಗಳ ಕಾರ್ಯವೈಖರಿ ವಿರುದ್ಧ ಕಿಡಿಕಾರಿದರು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಮತ್ತು ಎಲ್ಲ ಸೌಲಭ್ಯಗಳನ್ನು ಕೊಡುವವರೆಗೂ ಪ್ರಿಪೇಡ್‌ ಸ್ಮಾರ್ಟ್ ಮೀಟರ್ ಅಳವಡಿಸಬಾರದು. ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಮುಂದುವರಿಸಬೇಕು. ಅಲ್ಲದೆ ರೈತರಿಗೆ ಅಗತ್ಯವಾದ ವಿದ್ಯುತ್‌ನ್ನು ಸರ್ಕಾರವೇ ಒದಗಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ ಮಾತನಾಡಿ, ತಾಲೂಕಿನ ಹತ್ತಿ ಬೆಳಗಾರರಿಗೆ ನ್ಯಾಯ ಸಿಗಬೇಕು. ಹತ್ತಿ ಕಾಳಿನ ತೂಕದಲ್ಲಿ, ಬೆಲೆಯಲ್ಲಿ ಮೋಸ ಮಾಡಿ ರೈತರಿಗೆ ಕಿರುಕುಳ ಕೊಡುವ ಏಜೆಂಟರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎತ್ತಿನ ಹೊಳೆ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ತಾಲೂಕಿಗೆ 2ಟಿ ಎಂ ಸಿ ಹೆಚ್ಚುವರಿ ನೀರು ಒದಗಿಸಬೇಕು. ದೊಡ್ಡೇರಿ ಹೋಬಳಿ ಕೆರೆಗಳಿಗೂ ನೀರು ಹರಿಸಬೇಕು. ಅಂತರ್ಜಲ ಹೆಚ್ಚಿಸಲು ಹಳ್ಳಗಳಿಗೆ ಹರಿದು ಬರುವ ಕಾಲುವೆಗಳಲ್ಲಿನ ಜಂಗಲ್ ಕಟ್ ಮಾಡಿ ನೀರು ಸರಾಗವಾಗಿ ಹರಿದು ಬರಲು ಕ್ರಮ ಕೈಗೊಳ್ಳಬೇಕು. ಮಧುಗಿರಿ, ಪಾವಗಡ, ಕೊರಟಗೆರೆ, ಶಿರಾ, ಚಿತ್ರದುರ್ಗ,ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಆಂದ್ರದ ಮಡಕಶಿರಾ, ಹಿಂದುಪೂರ, ಪೆನಗೊಂಡ ಹಾಗೂ ಅನಂತಪುರ ಭಾಗಗಳಲ್ಲಿ ಹೆಚ್ಚು ಹುಣೆಸೆ ಬೆಳೆಯುತ್ತಿದ್ದು, ಹುಣೆಸೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ಫಸಲ್ ಭೀಮಾ ಯೋಜನೆಯ ವ್ಯಾಪ್ತಿಗೆ ತರಬೇಕು ಹುಣೆಸೆ ಮತ್ತು ಹಲಸು ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಬೆಳೆಗಾರರನ್ನು ರಕ್ಷಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀನಿವಾಸ್ ಏ. 21ರಂದು ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವದಾಗಿ ಭರವಸೆ ನೀಡಿದರು. ನಂತರ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೊಡ್ಡ ಮಾಳಯ್ಯ, ನಾದುರೂ ಕೆಂಚಪ್ಪ, ನಾಗರತ್ನಮ್ಮ ಚಿಕ್ಕ ಬೋರೇಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಾಜಶೇಖರ್, ಲಕ್ಷಣ ಗೌಡ, ನರಸಿಂಹಮೂರ್ತಿ, ಶಿರಾ ಲಕ್ಷ್ಮಣ್ ಗೌಡ, ರಂಗಹನುಮಯ್ಯ, ಲೋಕೇಶ್, ಶಬ್ಬೀರ್ ಬಾಷ್,ಭಾಗ್ಯಮ್ಮ,ನಾಗರಾಜು, ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತಕ್ಕೆ ಪರ್ಯಾಯ ವ್ಯವಸ್ಥೆಯಿಲ್ಲ, ರಕ್ತದಾನ ಅತ್ಯಂತ ಶ್ರೇಷ್ಠ: ಸಂಜೀವ್ ಕುಮಾರ್
ಅಗಳಗಂಡಿ ಪಂಚಾಯ್ತಿ ಕಾರೆಮನೆ ದಲಿತ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಿ