ಬ್ಯಾಡಗಿ: ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ತಾಲೂಕಿನ ಚಿಕ್ಕಣಜಿ ಹಾಗೂ ಹಿರೇಕೆರೂರ ತಾಲೂಕಿನ ಲಿಂಗಾಪುರ ಗ್ರಾಮದ ರೈತರು ಕೆಇಬಿ ಗ್ರೀಡ್‌ಗೆ ಬೀಗ ಹಾಕಿ ಶನಿವಾರ ಹಠಾತ ಪ್ರತಿಭಟನೆ ನಡೆಸಿದರು. ಗ್ರೀಡ್ ಬಳಿ ಸೇರಿದ ಎರಡು ಗ್ರಾಮದ ನೂರಾರು ರೈತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನ ಕೂಗಿದರು, ಬಳಿಕ ಗ್ರೀಡ್‌ಗೆ ಬೀಗ ಜಡಿದು ಧರಣಿ ನಡಸಿದರು.ಒಣಗುತ್ತಿವೆ ಬೆಳೆಗಳು: ಈ ವೇಳೆ ಮಾತನಾಡಿದ ರೈತ ಮುಖಂಡ ಮಲ್ಲೇಶಪ್ಪ ಡಂಬಳ, ಕಳೆದೊಂದು ವಾರದಿಂದ ಎರಡೂ ಗ್ರಾಮಗಳಿಗೆ ಸಮಪರ್ಕವಾಗಿ ವಿದ್ಯುತ್ ಪೂರೈಕೆ ಮಾಡದೇ ಹೆಸ್ಕಾಂ ಅಧಿಕಾರಿಗಳು ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದಾರೆ, ಕೃಷಿ ಚಟುವಟಿಕೆಗಳಿಗೆ ನೀರು ಹಾಯಿಸುವ ಕಾರ್ಯಗಳು ಅಡಚಣೆಗೆ ಉಂಟಾಗಿದ್ದು ಪಂಪ್‌ಸೆಟ್ ಬಳಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ, ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಭೀತಿ ಎದುರಾಗಿದ್ದು ಸದರಿ ಸಮಸ್ಯೆ ಕುರಿತು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಪರಿಹಾರ ದೊರಕಿಸಿಕೊಟ್ಟಿಲ್ಲವೆಂದು ಆಕ್ರೋಶ ಹೊರಹಾಕಿದರು.ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ರೀ: ರೈತ ರುದ್ರಸ್ವಾಮಿ ಹಿರೇಮಠ ಮಾತನಾಡಿ, ಇದೇ ಸಮಸ್ಯೆ ಕುರಿತು ಹಲವು ಬಾರಿ ಪ್ರತಿಭಟನೆ ಮಾಡಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಶಾಶ್ವತ ಪರಿಹಾರ ದೊರಕಿಲ್ಲ. ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿಯೂ ಮಾತಿಗೆ ತಪ್ಪುತ್ತಿದ್ದಾರೆ ಇದರಿಂದ ರೈತರು ಬದುಕು ಬೀದಿಗೆ ಬಂದಿದೆ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಬಾಕಿ ಉಳಿದಿದೆ ಎಂದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಿರೇಕೇರೂರ ಹೆಸ್ಕಾಂ ಏಇಇ ಜೋಶಿ ರೈತರನ್ನ ಸಮಾಧಾನಪಡಿಸಲು ಮುಂದಾದರು. ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು. ಈ ವೇಳೆ ಮಂಜುನಾಥ ವಾರದ, ರಾಜು ಮಟ್ಟಿ, ಶೇಖಪ್ಪ ಅರಳೀಕಟ್ಟಿ, ಹೇಮಣ್ಣ ಅರಳೀಕಟ್ಟಿ. ಪ್ರಭು ವಾರದ, ಹುಲಗಪ್ಪ ಗಿರಣಿವಡ್ಡರ ಅಶೋಕ ಬನ್ನಿಹಟ್ಟಿ, ಗುಡ್ಡಪ್ಪ ಬೆಣ್ಣಿ, ಸುರೇಶ ತಳವಾರ, ಅಜ್ಜಯ್ಯ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.