ನರಗುಂದದಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ರೈತರ ಆದ್ಯತೆ

KannadaprabhaNewsNetwork |  
Published : Apr 27, 2026, 02:15 AM IST
ನರಗುಂದದಲ್ಲಿ ರೈತರೊಬ್ಬರು ಟ್ರ್ಯಾಕ್ಟರ್‌ನಲ್ಲಿ ಗೊಬ್ಬರವನ್ನು ತುಂಬುತ್ತಿರುವುದು. | Kannada Prabha

ಸಾರಾಂಶ

ಇತ್ತೀಚೆಗೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಜಾನುವಾರುಗಳ ಸಂಖ್ಯೆ ಕುಸಿತವಾಗುತ್ತಿದೆ. ಹೀಗಾಗಿ ಸಗಣಿ ಗೊಬ್ಬರ ಉತ್ಪಾದನೆಯೂ ಕುಂಠಿತವಾಗುತ್ತಿದೆ. ರೈತರು ಸಹ ನೈಸರ್ಗಿಕ ಗೊಬ್ಬರ ಬಿಟ್ಟು ರಸಗೊಬ್ಬರಕ್ಕೆ ಹೆಚ್ಚು ಆಕರ್ಷಿತರಾಗಿದ್ದರು.

ಎಸ್.ಜಿ. ತೆಗ್ಗಿನಮನಿ

ನರಗುಂದ: ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ಈ ಬಾರಿ ರಸಗೊಬ್ಬರ ಕೊರತೆಯಾಗಬಹುದು ಎಂಬ ಭೀತಿ ಮಧ್ಯೆ ಇದೀಗ ಕೊಟ್ಟಿಗೆ (ಸಗಣಿ) ಗೊಬ್ಬರಕ್ಕೆ ರೈತರು ಪ್ರಾಧಾನ್ಯ ಕೊಡುತ್ತಿದ್ದಾರೆ.

ತಾಲೂಕಿನಲ್ಲಿ ಮುಂಗಾರು ಬಿತ್ತನೆಗಾಗಿ ರೈತರು ಜಮೀನುಗಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ ತಿಪ್ಪೆಗೊಬ್ಬರವನ್ನು ಜಮೀನಿಗೆ ಹಾಕುವುದಿಲ್ಲ. ಎರಡು ವರ್ಷ ಅಥವಾ ಮೂರು ವರ್ಷಕೊಮ್ಮೆ ಹಾಕುತ್ತಾರೆ. ಆದರೆ ಈ ಬಾರಿ ರಸಗೊಬ್ಬರ ಕೊರತೆಯಾಗಬಹುದು ಎಂಬ ಭೀತಿಯಿಂದ ಬಹುತೇಕ ರೈತರು ಜಮೀನುಗಳಿಗೆ ಸಗಣಿ ಗೊಬ್ಬರವನ್ನು ಹಾಕುತ್ತಿದ್ದಾರೆ.

ಇತ್ತೀಚೆಗೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿದೆ. ಇದರಿಂದ ಜಾನುವಾರುಗಳ ಸಂಖ್ಯೆ ಕುಸಿತವಾಗುತ್ತಿದೆ. ಹೀಗಾಗಿ ಸಗಣಿ ಗೊಬ್ಬರ ಉತ್ಪಾದನೆಯೂ ಕುಂಠಿತವಾಗುತ್ತಿದೆ. ರೈತರು ಸಹ ನೈಸರ್ಗಿಕ ಗೊಬ್ಬರ ಬಿಟ್ಟು ರಸಗೊಬ್ಬರಕ್ಕೆ ಹೆಚ್ಚು ಆಕರ್ಷಿತರಾಗಿದ್ದರು.

ನೈಸರ್ಗಿಕ ಗೊಬ್ಬರ: ಸಗಣಿ ಗೊಬ್ಬರ ನೈಸರ್ಗಿಕವಾದದ್ದು. ಬುದ್ಧಿವಂತ ರೈತರು ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡುತ್ತಾರೆ. ವರ್ಷವಿಡೀ ಕೊಟ್ಟಿಗೆಯಲ್ಲಿ ದೊರೆತ ದನಕರುಗಳ ಗಂಜಲ, ಸಗಣಿ, ದನಗಳು ತಿಂದು ಬಿಟ್ಟ ದಂಟು ಮತ್ತಿತರ ವಸ್ತುಗಳನ್ನು ಒಂದೆಡೆ ಸಂಗ್ರಹಿಸಿ ಕೊಟ್ಟಿಗೆ ಗೊಬ್ಬರ ಅಥವಾ ತಿಪ್ಪೆ ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಹೆಚ್ಚು ಜಾನುವಾರುಗಳನ್ನು ಸಾಕುತ್ತಿರುವವರ ಕೊಟ್ಟಿಗೆಯಲ್ಲಿ ಇದು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುತ್ತದೆ. ಹೆಚ್ಚು ಜಾನುವಾರುಗಳನ್ನು ಹೊಂದಿರುವವರು ತಮ್ಮ ಜಮೀನಿಗೆ ಹಾಕಿ ಮಿಕ್ಕಿದ್ದನ್ನು ಮಾರುತ್ತಾರೆ.

ಫಲವತ್ತತೆ ಹೆಚ್ಚು:

ಕೊಟ್ಟಿಗೆ ಗೊಬ್ಬರದಲ್ಲಿ ಬೆಳೆಗೆ ಸಿಗುವ ಪೋಷಕಾಂಶಗಳ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಮಣ್ಣನ್ನು ಫಲವತ್ತುಗೊಳಿಸುವ ಶಕ್ತಿ ಅದಕ್ಕಿದೆ. ಸಾವಯವ ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು, ಬದುವಿನ ಮಣ್ಣು, ಜವಾರಿ ಆಕಳಿನ ಮೂತ್ರ ಮತ್ತು ಹಲವು ಪದಾರ್ಥ ಬಳಸಿ ಗೊಬ್ಬರ ತಯಾರಿಸುವುದು ಸೂಕ್ತ. ಅದರಲ್ಲಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಹೊಲದ ಫಲವತ್ತತೆಗೆ ರಾಸಾಯನಿಕ ಗೊಬ್ಬರದ ಬದಲಿಗೆ ಸಾವಯವ ಗೊಬ್ಬರ ಬಳಸುವುದು ಒಳಿತು ಎಂದು ಖಾನಾಪುರ ಗ್ರಾಮದ ಸಾವಯವ ರೈತ ನಾಗನಗೌಡ ಕಗದಾಳ ತಿಳಿಸುತ್ತಾರೆ.ಸಗಣಿ ಗೊಬ್ಬರದಲ್ಲಿ ಸೂಕ್ಷ್ಮಾಣು ಜೀವಿಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಅವು ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿ. ಆದ್ದರಿಂದ ತಮ್ಮಲ್ಲಿ ಸಂಗ್ರಹ ಇರುವುದಷ್ಟೆ ಅಲ್ಲದೆ, ಬೇರೆಯವರ ಬಳಿ ಇರುವ ಕೊಟ್ಟಿಗೆ ಗೊಬ್ಬರ ಸಿಕ್ಕರೂ ರೈತರು ಖರೀದಿ ಮಾಡಿ ಕೊಟ್ಟಿಗೆ ಗೊಬ್ಬರ ಹೊಲಕ್ಕೆ ಹಾಕುವುದು ಸೂಕ್ತ ಎಂದು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಶ್ರೀಪಾದ ವಿಶ್ವೇಶ್ವರಯ್ಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾಲನೆ
2024ರ ಕನಕಗಿರಿ ಉತ್ಸವದ ಸ್ಮರಣಿಕೆ, ಗಂಧದ ಹಾರಗಳಿಗೆ ಧೂಳು