ತಾಲೂಕು ಕಚೇರೀಲಿ ಭ್ರಷ್ಟಾಚಾರ ಖಂಡಿಸಿ ರೈತರ ಪ್ರತಿಭಟನೆ

KannadaprabhaNewsNetwork |  
Published : Feb 27, 2026, 01:30 AM IST
ಕೆ ಕೆ ಪಿ ಸುದ್ದಿ 02:ತಾಲ್ಲೂಕು ಕಛೇರಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಕನಕಪುರ: ತಾಲೂಕು ಕಚೇರಿಯಲ್ಲಿ ವ್ಯಾಪಕ ವಂಚನೆ, ಭ್ರಷ್ಟಾಚಾರವನ್ನು ಖಂಡಿಸಿ ತಾಲೂಕು ರೈತ ಸಂಘ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು

ಕನಕಪುರ: ತಾಲೂಕು ಕಚೇರಿಯಲ್ಲಿ ವ್ಯಾಪಕ ವಂಚನೆ, ಭ್ರಷ್ಟಾಚಾರವನ್ನು ಖಂಡಿಸಿ ತಾಲೂಕು ರೈತ ಸಂಘ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಪ್ರತಿಭಟನಾ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ದೇಶಕ್ಕೆ ಅನ್ನ ಕೊಡುವ ಅನ್ನದಾತ. ಅವರ ಸಂಕಷ್ಟ ಅರಿತು ಅವರ ಮನೆ ಬಾಗಿಲಿಗೆ ಸರ್ಕಾರದ ಸೌಲಭ್ಯಗಳು ಕಲ್ಪಿಸಬೇಕು. ರೈತ ಕೂಲಿಯಿಲ್ಲದೆ ಬಿಸಿಲು, ಮಳೆಯನ್ನು ಲೆಕ್ಕಿಸದೆ ದುಡಿಯುವ ಶ್ರಮಿಕ. ಸರ್ಕಾರಿ ಅಧಿಕಾರಿಗಳು ದೇಶದ ಬೆನ್ನೆಲುಬಾದ ರೈತನ ಕೆಲಸಗಳಿಗೆ ಕಚೇರಿಗೆ ಅಲೆದಾಟ ತಪ್ಪಿಸಿ, ಅವರಿಗೆ ಅಧಿಕಾರಿಗಳು ಸ್ಪಂದಿಸಬೇಕು. ರೈತ ಸಿಡಿದೆದ್ದರೆ ಯಾರೂ ಉಳಿಯಲು ಸಾಧ್ಯವಿಲ್ಲ. ಅಧಿಕಾರಿಗಳು ಅವರ ಸಮಸ್ಯ ಗಳನ್ನು ಅರಿತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಜಯಕರ್ನಾಟಕ ಜನಪರ ಸಂಘಟನೆಯ ರಾಜ್ಯ ಸಲಹೆ ಗಾರ ಕುಮಾರಸ್ವಾಮಿ ಮಾತನಾಡಿ, ತಾಲೂಕು ಕಚೇರಿ ಮಧ್ಯವರ್ತಿಗಳ ಕಪಿಮುಷ್ಠಿಯಲ್ಲಿದೆ. ಹಣ ನೀಡದೆ ಬಡವರ, ರೈತರ ಯಾವುದೇ ಕೆಲಸ ಆಗುವುದಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಕೈಗೊಂಬೆಗಳಾಗಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ರಾಗಿ ಕೇಂದ್ರದಲ್ಲಿ ತಮಿಳುನಾಡಿನಲ್ಲಿ ಬೆಳೆದ ರಾಗಿಗೆ ನಮ್ಮ ತಾಲೂಕು ರೈತರಿಂದ ಪಹಣಿ ಪಡೆದು ರಾಗಿ ಕೊಂಡುಕೊಳ್ಳುತ್ತಿದ್ದಾರೆ. ಇದಕ್ಕೆ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ನೇರವಾಗಿ ಪಾಲುದಾರರಾಗಿದ್ದಾರೆ. ತಹಸೀಲ್ದಾರ್ ಇವರನ್ನು ಮಟ್ಟಹಾಕದಿದ್ದಲ್ಲಿ ತಾಲೂಕಿನ ರೈತರ ಸಂಕಷ್ಟಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ತಾಲೂಕು ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೇ ಕಂದಾಯ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಈ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಬೇಕು. ಆದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ತಾಲೂಕು ಕೇಂದ್ರಗಳಲ್ಲಿ ಖಾಸಗಿ ಮನೆ ಮಾಡಿಕೊಂಡು ದಲ್ಲಾಳಿಗಳ ಮೂಲಕ ಅಕ್ರಮ ದಂಧೆ ನಡೆಸುತ್ತಿದ್ದಾರೆ. ರೈತರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ, ಹಲವಾರು ವರ್ಷಗಳಿಂದ ಒಂದೇ ಕಡೆ ಬೇರೂರಿರುವ ಭ್ರಷ್ಟ ಅಧಿಕಾರಿಗಳನ್ನು ಬದಲಾವಣೆ ಮಾಡುವವರೆಗೂ ತಾಲೂಕಿನ ರೈತನ ಕೆಲಸವಾಗದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಮಲ್ಲಯ್ಯ, ಜಿಲ್ಲಾ ಗೌರವಾಧ್ಯಕ್ಷ ತಿಮ್ಮೇಗೌಡ, ರಾಜ್ಯ ಮಹಿಳಾ ಕಾರ್ಯದರ್ಶಿ ರಮ್ಯಾ ರಾಮಣ್ಣ, ಯುವ ಜಿಲ್ಲಾಧ್ಯಕ್ಷ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ರತ್ನಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಎಚ್.ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು, ನಗರಸಭಾ ಮಾಜಿ ಸದಸ್ಯ ಸ್ಟುಡಿಯೋ ಚಂದ್ರು, ಸಾಮಾಜಿಕ ಹೋರಾಟಗಾರ ಹೊಸದುರ್ಗ ಪ್ರಶಾಂತ್ ಸೇರಿದಂತೆ ರೈತ ಮುಖಂಡರು, ಪಾಲ್ಗೊಂಡಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಡೆಯಬೇಕೇಂದು ಆಗ್ರಹಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ