ಹೂವಿನಹಡಗಲಿ: ತಾಲೂಕಿನ ಕೊಂಬಳಿ ಗ್ರಾಮದಲ್ಲಿ ಕಬ್ಬು ಬೆಳೆಗಾರರು ಗಂಗಾಪುರದ ವಿಜಯನಗರ ಸಕ್ಕರೆ ಕಾರ್ಖಾನೆ ವಿರುದ್ಧ ಟ್ರ್ಯಾಕ್ಟರ್‌ಗಳನ್ನು ತಡೆದು ಪ್ರತಿಭಟನೆ ಮಾಡಿದರು.
ಕಬ್ಬು ಕಟಾವಿಗೆ ರೈತರೇ ಹಣ ನೀಡಬೇಕಿದೆ. ಸಾಗಾಣಿಕೆ ಕಾರಣಕ್ಕಾಗಿ ಕೆಲಸಗಾರರು ಬರುತ್ತಿಲ್ಲ. ವಿದ್ಯುತ್ ಸಮಸ್ಯೆ, ನದಿಯಲ್ಲಿ ನೀರಿಲ್ಲ. ಇಳುವರಿ ಕುಂಠಿತಗೊಳ್ಳುತ್ತಿದೆ. ರೈತರ ಮಧ್ಯೆಯೇ ತಾರತಮ್ಯ ಮಾಡುತ್ತಾರೆ. ದೂರದ ಊರಿನ ಗ್ರಾಮಗಳ ಕಬ್ಬು ಕಟಾವಿಗೆ ವಿಳಂಬ ಮಾಡುತ್ತಾರೆ. ಕಾರ್ಖಾನೆ ಮಾಲೀಕರ ಬಳಿ ಗೊಬ್ಬರ ತಂದರೆ ಬಡ್ಡಿ ಹಾಕುತ್ತಾರೆ. ಕಬ್ಬು ಕಟಾವು ತಡವಾದರೆ ಅದಕ್ಕೆ ಯಾವ ಬಡ್ಡಿ ಇಲ್ಲ. 4 ತಿಂಗಳಾದರೂ ಕಟಾವು ಮಾಡುತ್ತಿಲ್ಲ. ಕಾರ್ಖಾನೆಯವರ ಮಾತನ್ನೆ ಕೆಲಸಗಾರರು ಕೇಳುತ್ತಿಲ್ಲ. ಕಬ್ಬು ಬೆಳೆಯನ್ನು ಇನ್ನು ಮುಂದಿನ ದಿನಗಳಲ್ಲಿ ಬೆಳೆಯುವುದಿಲ್ಲ. ಇದರಿಂದ ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ. ನಮ್ಮ ನೋವು ಯಾರೂ ಕೇಳುತ್ತಿಲ್ಲವೆಂದರು.
ರೈತರ ಜಮೀನುಗಳಿಗೆ ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕಳಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. 12 ತಿಂಗಳಿಗೆ ಕಟಾವಾಗಬೇಕಿದ್ದ ಕಬ್ಬು 14 ತಿಂಗಳು ಕಳೆದರೂ ಕಟಾವು ಮಾಡುತ್ತಿಲ್ಲ. ಟನ್ನಿಗೆ 100ರಿಂದ 150 ನಾವೇ ನೀಡುತ್ತೇವೆ. ಉಳಿದ ಹಣವನ್ನು ಕಾರ್ಖಾನೆ ಮಾಲಿಕರೇ ಕೊಡಬೇಕೆಂದು ಪಟ್ಟು ಹಿಡಿದರು.ರೈತರಿಗೆ ಸರ್ಕಾರ ನಿಗದಿ ಮಾಡಿದ ಹಣವನ್ನು ನೀಡಬೇಕು. ಅದರಲ್ಲಿ ಕಟಿಂಗ್ ಮತ್ತು ಇತರೆ ಬೇರೆ ಕಬ್ಬು ಸಾಗಾಣಿಕೆ ಮಾಡುತ್ತಾರೆ. ಆದ ನಂತರ ಕಾರ್ಖಾನೆ ಸಿಬ್ಬಂದಿ ಏನಾದರೂ ಕೇಳಿದರೇ ರೈತರನ್ನೇ ಗದರಿಸಿ ಕಳುಹಿಸುತ್ತಾರೆ. ಕಬ್ಬು ಸಾಗಾಣಿಕೆಯ ಏರಿಯಾ ಮ್ಯಾನೇಜರ್ ಕೃಷ್ಣನಾಯ್ಕ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು.
ಕೊಂಬಳಿ ಭಾಗದಲ್ಲಿ 5300 ಟನ್ ಕಬ್ಬು ಇದೆ. 60 ದಿನಗಳಲ್ಲಿ ಕಟಾವು ಮಾಡುತ್ತೇವೆ. ಕೆಲಸಗಾರರು ಸಾಲುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇಲ್ಲಿ ಉಳಿದ ಕಬ್ಬನ್ನು ಕಟಾವು ಮಾಡಲು ಕೆಲಸಗರಾರ ಬ್ಯಾಚ್ ಕಳುಹಿಸಿ ಎಂದು ಮನವಿ ನೀಡಿದ್ದೀರಿ. ಅದರಂತೆ ನಾವು ಬೇರೆ ಕಡೆ ಹೋದ ಬ್ಯಾಚ್ ಬಂದ ತಕ್ಷಣ ಇಲ್ಲಿ ಕಟಾವು ಮಾಡಲಾಗುವುದು. ಮಶಿನ್ ತರಿಸಲಾಗಿದೆ. ಅದರಂತೆ ಮಶಿನ್ ನಿಂದ ಕಟಾವು ಮಾಡಲಾಗುವುದು. ಪ್ರತಿದಿನ 100 ಟನ್ ಕಟಾವು ಮಾಡಿ ಕಾರ್ಖಾನೆಗೆ ಸಾಗಾಣಿಕೆ ಮಾಡುತ್ತೇವೆ. ಕಾರ್ಖಾನೆಯು ಸಾಮರ್ಥ್ಯ ಮೀರಿ ಕಬ್ಬನ್ನು ಅರೆಯುತ್ತಿದ್ದೇವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಕಾರ್ಖಾನೆಗಳು ಬಂದ್ ಆಗಿದ್ದು, ಅಲ್ಲಿಯ ಕೆಲಸಗಾರರನ್ನು ಕರೆಸಿ ಕಬ್ಬುಗಳನ್ನು ಕಟಾವು ಮಾಡುತ್ತೇವೆ. ಕಬ್ಬು ಸಾಗಾಣಿಕೆ ಮಾಡಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಮೂರು ದಿನದಲ್ಲಿ ಕಾರ್ಮಿಕರನ್ನು ಕಳುಹಿಸಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ರೈತರು ಹಿಂದಕ್ಕೆ ಪಡೆದರು.