ಮಾರ್ಕೆಟ್‌ ಪಾರ್ಕಿಂಗ್‌ ವಿರುದ್ಧ ರೈತರ ಪ್ರತಿಭಟನೆ

KannadaprabhaNewsNetwork |  
Published : Jun 17, 2026, 03:30 AM IST
farmers protest 3 | Kannada Prabha

ಸಾರಾಂಶ

ಕೆ.ಆರ್‌.ಮಾರುಕಟ್ಟೆಯ ತಳಮಹಡಿಯಲ್ಲಿ ನಿರ್ಮಿಸಿರುವ ವಾಹನಗಳ ಪಾರ್ಕಿಗ್‌ ವ್ಯವಸ್ಥೆಯಿಂದಾಗಿ ರೈತರಿಗೆ ತೊಂದರೆಯಾಗಿದ್ದು ತಕ್ಷಣ ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು, ವ್ಯಾಪಾರಿಗಳು ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆ.ಆರ್‌.ಮಾರುಕಟ್ಟೆ ತಳಮಹಡಿಯಲ್ಲಿ ನಿರ್ಮಾಣ ಮಾಡಿರುವ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆಯಿಂದಾಗಿ ರೈತರಿಗೆ ತೊಂದರೆಯಾಗಿದ್ದು ತಕ್ಷಣ ಸರಿಪಡಿಸಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು, ವ್ಯಾಪಾರಿಗಳು ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಮಾರುಕಟ್ಟೆ ತಳಮಹಡಿಯಲ್ಲಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದ್ದು ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌, ಅಗ್ನಿಶಾಮಕ ದಳದ ವಾಹನ ಬರಲು ಅವಕಾಶವಿಲ್ಲದಂತಾಗಿದೆ. ಈ ಹಿಂದೆ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿ ಶಾಮಕ ವಾಹನ ಬರಲು ಸಾಧ್ಯವಾಗದೇ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೊಪ್ಪು, ತರಕಾರಿ ಮತ್ತಿತರ ಸಾಮಗ್ರಿಗಳನ್ನು ತರುವ ರೈತರ ವಾಹನಗಳನ್ನು ಮಾರುಕಟ್ಟೆಯ ಹೊರಗೆ 400 ಮೀ.ದೂರದಲ್ಲಿ ನಿಲ್ಲಿಸಬೇಕಾಗಿದೆ. ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದು ಅವರಿಗೆ ಪರ್ಯಾಯ ವ್ಯವಸ್ಥೆ ಮಾಡದೇ ಉದ್ಯೋಗವಿಲ್ಲದಂತೆ ಮಾಡಲಾಗಿದೆ. ಪಾರ್ಕಿಂಗ್‌ ವ್ಯವಸ್ಥೆ ಮಾಡಲು ರಸ್ತೆ ಪಕ್ಕದ ಸಣ್ಣ ಪುಟ್ಟ ಅಂಗಡಿಗಳ ಮುಂದೆ ಜನರು ಓಡಾಡದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ಇದರಿಂದ ವ್ಯಾಪಾರವಿಲ್ಲದೇ ಅವರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಟೀಕಿಸಿದರು.

ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿ:

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾತನಾಡಿ, ಕೆ.ಆರ್‌.ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡುವುದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲು, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವೆಗಳ ವಾಹನಗಳು ಅಡೆತಡೆಯಿಲ್ಲದೇ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಸಹಕಾರ ನೀಡಬೇಕು ಎಂದು ಕೋರಿದರು. ವ್ಯಾಪಾರಿಗಳು, ರೈತರು ವ್ಯಾಪಾರ ನಡೆಸುವ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಾಪಾರಿಗಳು, ರೈತರು ಹಾಗೂ ಸಂಘ-ಸಂಸ್ಥೆಗಳ ಮುಖಂಡರೊಂದಿಗೆ ಜಿಬಿಎ ಮುಖ್ಯ ಆಯುಕ್ತರು ಚರ್ಚಿಸಿ ಅಂತಿಮವಾಗಿ ಯೋಜನೆ ಜಾರಿಗೊಳಿಸಲಿದ್ದಾರೆ ಎಂದು ಭರವಸೆ ನೀಡಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಬಳಿಕ ಪ್ರತಿಭಟನಾಕಾರರು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರನ್ನು ಭೇಟಿ ಮಾಡಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯರು ಹಳ್ಳಿಗಳಲ್ಲೂ ಆರೋಗ್ಯ ಸೇವೆ ನೀಡಿ: ಗೌರ್ನರ್‌
ನದಿ ಬತ್ತುತ್ತಿದ್ದರೂ ಕುಡಿಯುವ ನೀರಿಗಿಲ್ಲ ಬರ!