ವಕ್ಫ್‌ ಆಸ್ತಿ ಹೆಸರಿನಲ್ಲಿ ರೈತರಿಗೆ ನೋಟಿಸ್‌ ಖಂಡಿಸಿ ರೈತರ ಪ್ರತಿಭಟನೆ

KannadaprabhaNewsNetwork | Published : Nov 6, 2024 12:36 AM

ಸಾರಾಂಶ

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಹೊಸಪೇಟೆ: ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿ ಹಕ್ಕುಗಳ ಕಾಲಂ-9 ಮತ್ತು 11ರಲ್ಲಿ ವಕ್ಫ್‌ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿದೆ ಮತ್ತು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಅದನ್ನು ರದ್ದುಗೊಳಿಸಿ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಿಜಯನಗರ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ರವಾನಿಸಲಾಯಿತು.

ರಾಜ್ಯದಲ್ಲಿ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ರೈತರ ಜಮೀನಿನ ಪಹಣಿ ಹಕ್ಕುಗಳ ಕಾಲಂ ನಂ 9 ಮತ್ತು 11ರಲ್ಲಿ ವಕ್ಫ್ ಆಸ್ತಿ ಬಗ್ಗೆ ವಿಚಾರಣೆ ಹಂತದಲ್ಲಿದೆ ಮತ್ತು ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದನ್ನು ಜಾರಿಗೊಳಿಸಿದ ರಾಜ್ಯ ಸರ್ಕಾರ ಮತ್ತು ವಕ್ಫ್‌ ಬೋರ್ಡ್ ಅಧಿಕಾರಿಗಳ ಕ್ರಮದ ವಿರುದ್ಧ ನಮ್ಮ ಧಿಕ್ಕಾರವಿದೆ. ತಲೆತಲಾಂತರದಿಂದ ರೈತರು ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಕೆಲ ರೈತರು ಜಮೀನು ಖರೀದಿ ಮಾಡಿ ಉಳುಮೆ ಮಾಡುತ್ತಿದ್ದಾರೆ. ಈಗಾಗಲೇ ವಿಜಯನಗರ ಜಿಲ್ಲೆಯ ಕೊಟ್ಟೂರು ಭಾಗದಲ್ಲಿ ಕೆಲ ರೈತರಿಗೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿಯಾಗಿ ನೋಟಿಸ್‌ ಜಾರಿ ಮಾಡಿದ್ದಾರೆ. ಹೊಸಪೇಟೆಯ ಕೆಲ ಭಾಗದ ರೈತರಿಗೂ ನೋಟಿಸ್‌ಗಳನ್ನು ನೀಡಿ, ಸಂಬಂಧಪಟ್ಟ ಅಧಿಕಾರಿಗಳೇ ದೌರ್ಜನ್ಯದಿಂದ ಇದರ ಬಗ್ಗೆ ಯಾರಿಗೂ ಹೇಳದಂತೆ ರೈತರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ, ನೋಟಿಸ್‌ಗಳ ಬಗ್ಗೆ ಯಾವುದೇ ರೀತಿಯಾಗಿ ರೈತರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ಏಕಾಏಕಿ ರೈತರ ಭೂಮಿ ಕಬಳಿಸುವ ಹುನ್ನಾರ ನಡೆಸುತ್ತಿದೆ. ಯಾವುದೇ ಕಾರಣಕ್ಕೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬಾರದು ಮತ್ತು ಬಿಟ್ಟುಕೊಡುವ ಮಾತೇ ಇಲ್ಲ. ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಕೂಡಲೇ ರದ್ದುಗೊಳಿಸಿ ಸರಿಪಡಿಸಬೇಕು. ಇಲ್ಲದಿದ್ದಲ್ಲಿ ರೈತರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ರೈತರಿಗೆ ಏನಾದರೂ ತೊಂದರೆ ಉಂಟಾದರೆ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಅವರು ವಿಜಯನಗರ ಜಿಲ್ಲೆಗೆ ಬಂದರೆ, ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದರು.

ಮುಖಂಡರಾದ ಮೆಟ್ರಿ ಜಡೆಪ್ಪ, ಜಿಲ್ಲಾಧ್ಯಕ್ಷ ಟಿ. ನಾಗರಾಜ್ ಮಾತನಾಡಿದರು. ಮುಖಂಡರಾದ ಆರ್.ಆರ್. ತಾಯಪ್ಪ, ವಿ. ಗಾಳೆಪ್ಪ, ರಾಮಾಂಜಿನಿ, ಸತೀಶ್‌, ನಾಗೇಶ್‌, ಜೆ.ಜಿ. ವಿರೂಪಾಕ್ಷಿ, ಎಲ್. ನಾಗೇಶ್, ಕೆ. ಸುರೇಶ್‌, ಮನಸಾಲಿ ರಾಘವೇಂದ್ರ, ಸಾಗರ್, ಮೂರ್ತಿ, ಬಾಬು ಮತ್ತಿತರರಿದ್ದರು.

Share this article