ಕನ್ನಡಪ್ರಭ ವಾರ್ತೆ ಚಾಮರಾಜನಗರಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿರುವುದನ್ನು ಖಂಡಿಸಿ ಗುಂಡ್ಲುಪೇಟೆ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ವಿದೇಶಿ ವ್ಯವಹಾರಗಳ ಮಹಾನಿರ್ದೇಶನಾಲಯವು ೦೭-೧೨-೨೦೨೩ ರಿಂದ ಅನ್ವಯವಾಗುವಂತೆ ಈರುಳ್ಳಿ ರಫ್ತನ್ನು ೩೧/೦೩/೨೦೨೪ ರವರೆಗೆ ಜಾರಿಯಲ್ಲಿರುವಂತೆ ನಿಷೇಧಿಸಲಾಗಿದೆ. ಇದರಿಂದ ದೇಶದ ಈರುಳ್ಳಿ ಮಾರುಕಟ್ಟೆಯಲ್ಲಿ ತಲ್ಲಣವುಂಟಾಗಿ ಈರುಳ್ಳಿ ಬೆಲೆ ಪಾತಾಳಕ್ಕೆ ಕುಸಿದಿದೆ ಎಂದರು.
ಪ್ರಸ್ತುತ ಈರುಳ್ಳಿ ಬೆಲೆ ಸ್ಥಳೀಯ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ೧೦ ರು.ಗೆ ಬಂದು ನಿಂತಿದೆ. ಇದರಿಂದ ಈರುಳ್ಳಿ ಬೆಳೆಗಾರರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ವರ್ಷ ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತದೆ. ಈ ವರ್ಷವೂ ಸಹ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿದೆ. ರಫ್ತು, ನಿರ್ಬಂಧದಿಂದ ತಲೆದೋರಿರುವ ಬೆಲೆಕುಸಿತದಿಂದಾಗಿ ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಎಂದರು.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಈರುಳ್ಳಿ ಬೆಳೆಯುವ ರೈತರಿಗೆ ಮರಣ ಶಾಸನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ವಿದೇಶಿ ವ್ಯವಹಾರಗಳ ಮಹಾನಿರ್ದೇಶನಾಲಯದ ಮಹಾನಿರ್ದೇಶಕರಿಗೆ ಮತ್ತು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವರಿಗೆ ನಿರ್ಬಂಧದಿಂದಾಗಿರುವ ಆರ್ಥಿಕ ಸಮಸ್ಯೆಯನ್ನು ಈರುಳ್ಳಿ ಬೆಳೆಗಾರರ ಹಿತದೃಷ್ಟಿಯಿಂದ ಸವಿವರವಾಗಿ ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಈ ಮನವಿಯನ್ನು ಸಲ್ಲಿಸಲಾಗಿದೆ ಎಂದರು,ರಫ್ತು, ನಿರ್ಬಂಧ ಸಡಿಲಿಸದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ಎದುರಾಗುವ ಆರ್ಥಿಕ ನಷ್ಟಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗುತ್ತದೆ. ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತು ಚಳುವಳಿಗಳು ತೀವ್ರತರವಾಗಿರುತ್ತದ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶಿವಪ್ರಸಾದ್, ಮಾದಪ್ಪ, ಚಂದ್ರಶೇಖರಮೂರ್ತಿ, ಸಂಪತ್, ಗಂಗಾಧರಪ್ಪ, ನಂಜುಂಡಸ್ವಾಮಿ, ಮಹೇಂದ್ರ, ಸತೀಶ್ ರೇಚಪ್ಪ, ವೃಷಬೇಂದ್ರ, ಗಂಗಾಧರಸ್ವಾಮಿ, ರಾಜಪ್ಪ ಇತರರು ಭಾಗವಹಿಸಿದ್ದರು.