ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ರೈತರು ಬೆಳೆದ ತರಕಾರಿಯನ್ನು ಎಪಿಎಂಸಿಗೆ ತೆಗೆದುಕೊಂಡು ಬಂದು ಹಾಕುತ್ತಾರೆ. ಈ ರೀತಿ ಹಾಕಿದ ತರಕಾರಿ ಚೀಲ ಗಳನ್ನು ರೈತರಿಗೆ ಯಾವುದೇ ಮಾಹಿತಿ ಇಲ್ಲದೇ ದಲ್ಲಾಳಿಗಳು ಲೋಡ್ ಮಾಡಿ ಬೇರೆ ಕಡೆಗೆ ಕಳುಹಿಸುತ್ತಾರೆ. ಕೊನೆಗೆ ಯಾವುದೋ ಒಂದು ಚೀಲವನ್ನು ಮುಂದಿಟ್ಟುಕೊಂಡು ಹರಾಜು ಪ್ರಕ್ರಿಯೆ ನಡೆಸುತ್ತಾರೆ. ತರಕಾರಿಗೆ ದಲ್ಲಾಳಿಗಳು ಮತ್ತು ವ್ಯಾಪಾರಿಗಳು ಅವರಿಗೆ ಬೇಕಾದಂತೆ ದರ ನಿಗದಿ ಪಡಿಸಿಕೊಳ್ಳುತ್ತಾರೆ. ಮಧ್ಯವರ್ತಿಗಳು ನಿಗದಿ ಪಡಿಸಿದ ದರವನ್ನು ರೈತರು ಪಡೆಯಬೇಕಾದ ಪರಿಸ್ಥಿತಿ ಚಿಕ್ಕಮಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಇದೆ.
ಜತೆಗೆ, ಮಧ್ಯವರ್ತಿಗಳಿಗೆ ಪ್ರತಿ ಕೆ.ಜಿಗೆ ₹2ರಿಂದ ₹3 ಕಮಿಷನ್ ನೀಡಬೇಕಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಬೀನ್ಸ್‌ಗೆ ₹70 ರಿಂದ ₹80 ದರ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ಶುಕ್ರವಾರ ಪ್ರತಿ ಕೆಜಿಗೆ ₹60 ನಿಗದಿ ಪಡಿಸಲಾಗಿತ್ತು. ಶನಿವಾರ ₹40ಗೆ ಇಳಿಕೆ ಮಾಡಲಾಗಿದೆ. ಒಂದೇ ದಿನಕ್ಕೆ ಪ್ರತಿ ಕೆಜಿಗೆ ₹20 ಕಡಿಮೆ ಮಾಡಿದ್ದಾರೆ. ಒಂದು ಚೀಲ ಬೀನ್ಸ್ ಕೊಯ್ಲು ಮಾಡಲು ₹700 ಕೂಲಿ ನೀಡಬೇಕು. ಗೊಬ್ಬರದ ಬೆಲೆ ಹೆಚ್ಚಾಗಿದೆ. ಈ ರೀತಿ ಇರುವಾಗ ದರ ಇಳಿಕೆ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.ಎಪಿಎಂಸಿಗೆ ಸಂಬಂಧಪಟ್ಟ ಅಧಿಕಾರಿಗಳು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ನೂರಾರು ಜನ ರೈತರಿ ಪ್ರತಿಭಟನೆ ನಡೆಸಿದರು,
ಚಿಕ್ಕಮಗಳೂರು ಎಪಿಎಂಸಿಯಲ್ಲಿ ತಡರಾತ್ರಿ ರೈತರನ್ನು ಕರೆಸಿಕೊಂಡು ಉತ್ಪನ್ನಗಳ ಹರಾಜು ಪ್ರಕ್ರಿಯೆ ಮಾಡುತ್ತಾರೆ. ಪ್ರತಿ ಬಾರಿ ಈ ರೀತಿ ರಾತ್ರಿ ರೈತರನ್ನು ಕರೆಸಿ ಹರಾಜು ಪ್ರಕ್ರಿಯೆ ನಡೆಸುತ್ತಾರೆ ಎಂದು ರೈತರು ದೂರಿದರು.
ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಗೆ ಗೇಟ್‌ಗೆ ಬೀಗ ಹಾಕಿ ಶನಿವಾರ ರಾತ್ರಿ ರೈತರು ಪ್ರತಿಭಟನೆ ನಡೆಸಿ, ಎಪಿಎಂಸಿ ಆಡಳಿತ ವ್ಯವಸ್ಥೆ ವಿರುದ್ಧ ಘೋಷಣೆ ಕೂಗಿದರು.